ಕರಾವಳಿ

ಕಾರವಾರಕ್ಕೆ ಪ್ರವಾಹ ಸಂದರ್ಭದಲ್ಲಿ ಉಪಯೋಗಕ್ಕೆ ಬರುವ ತಂತ್ರಜ್ಞಾನ ರೆಸ್ಕ್ಯೂ ಡ್ರೋಣ್ ಆಗಮನ

Pinterest LinkedIn Tumblr


ಕಾರವಾರ(ಜು.28): ಕಳೆದ ಬಾರಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆ ಉತ್ತರಕನ್ನಡ ಜಿಲ್ಲೆಯಲ್ಲೂ ನೆರೆ ಪರಿಸ್ಥಿತಿ ಉಂಟಾಗುವಂತೆ ಮಾಡಿತ್ತು. ಏಕಾಏಕಿ ಎದುರಾದ ನೆರೆ ನದಿಪಾತ್ರದ ಜನರ ಜೀವನವನ್ನ ಅಸ್ತವ್ಯಸ್ತವಾಗಿಸಿದ್ದು, ಹಲವೆಡೆ ಸಂಕಷ್ಟದಲ್ಲಿ ಸಿಲುಕಿದ್ದವರನ್ನ ಪತ್ತೆ ಮಾಡುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿತ್ತು. ಈ ನಿಟ್ಟಿನಲ್ಲಿ ಪ್ರಕೃತಿ ವಿಕೋಪದಂತಹ ಪರಿಸ್ಥಿತಿಗಳ ಸಂದರ್ಭದಲ್ಲಿ ಸಹಾಯಕ್ಕೆ ಅನುಕೂಲವಾಗಲು ಜಿಲ್ಲಾಡಳಿತ ತಂತ್ರಜ್ಞಾನ ಅಳವಡಿಸಿಕೊಳ್ಳೋದಕ್ಕೆ ಮುಂದಾಗಿದೆ.

ಪಶ್ಚಿಮ ಘಟ್ಟಗಳ ಸರಣಿ, ಇನ್ನೊಂದೆಡೆ ವಿಶಾಲವಾದ ಕರಾವಳಿ ತೀರವನ್ನ ಹೊಂದಿರುವ ವಿಶಿಷ್ಟ ಜಿಲ್ಲೆ ಉತ್ತರಕನ್ನಡ. ಅಲ್ಲದೇ ಮಳೆಗಾಲದಲ್ಲಿ ಹೆಚ್ಚು ಪ್ರಮಾಣದಲ್ಲಿ ಮಳೆ ಸಹ ಸುರಿಯುವುದರಿಂದ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುವ ಪರಿಣಾಮ ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ ವರ್ಷ ಸಹ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರೀ ವರ್ಷಧಾರೆಯಿಂದಾಗಿ ಜಿಲ್ಲೆಯ ನೂರಾರು ಗ್ರಾಮಗಳು ಜಲಾವೃತಗೊಂಡಿದ್ದು ಸಾವಿರಾರು ಕುಟುಂಬಗಳು ನಿರಾಶ್ರಿತರಾಗುವಂತಾಗಿತ್ತು. ಬಹುತೇಕ ಗ್ರಾಮೀಣ ಪ್ರದೇಶಗಳು ದಟ್ಟ ಅರಣ್ಯ ಜೊತೆಗೆ ಗುಡ್ಡಗಾಡು ಪ್ರದೇಶಗಳಲ್ಲಿ ಇರುವುದರಿಂದಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಜಿಲ್ಲಾಡಳಿತ ಹರಸಾಹಸ ಪಡುವಂತಾಗಿತ್ತು.

ಈ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರನ್ನ ಗುರುತಿಸಲು ಹಾಗೂ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಅನುಕೂಲವಾಗುವ ತಂತ್ರಜ್ಞಾನವನ್ನ ಉತ್ತರಕನ್ನಡ ಜಿಲ್ಲಾಡಳಿತ ಅಳವಡಿಸಿಕೊಳ್ಳಲು ಮುಂದಾಗಿದೆ. ವಿಪತ್ತು ನಿರ್ವಹಣಾ ಯೋಜನೆ ಅಡಿಯಲ್ಲಿ ಡ್ರೋನ್ ಒಂದನ್ನ ಖರೀದಿಸಿದ್ದು ತುರ್ತು ಸಂದರ್ಭಗಳಲ್ಲಿ ಬಳಕೆಗೆ ಅನುಕೂಲವಾಗುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಇದರ ಜವಾಬ್ದಾರಿಯನ್ನ ವಹಿಸಿದೆ. ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಡ್ರೋನ್ ಅನ್ನು ಐಡಿಯಾ ಫೋರ್ಜ್ ಕಂಪೆನಿಯಿಂದ ಖರೀದಿಸಿದ್ದು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಡ್ರೋನ್‌ಗೆ ಚಾಲನೆಯನ್ನ ಸಹ ನೀಡಿದ್ದಾರೆ.

ಇನ್ನು ಈ ಡ್ರೋನ್‌ನ ಪ್ರಮುಖ ವಿಶೇಷಗಳೆಂದರೆ ಇದು ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನ ಹೊಂದಿದ್ದು ಮೂರು ಕಿಲೋ ಮೀಟರ್ ದೂರದವರೆಗೆ ಹಾರಾಟ ನಡೆಸಬಲ್ಲದು. ಅಲ್ಲದೇ ಸುಮಾರು 1 ಕಿಲೋ ಮೀಟರ್ ದೂರದವರೆಗಿನ ವಸ್ತುವಿನ ಚಿತ್ರಣವನ್ನ ಈ ಡ್ರೋನ್ ಸ್ಪಷ್ಟವಾಗಿ ಸೆರೆಹಿಡಿಯುತ್ತದೆ. ವಿಶೇಷ ಅಂದ್ರೆ ಇದರಲ್ಲಿ ಆಟೋ ಪೈಲೆಟ್ ವ್ಯವಸ್ಥೆ ಸಹ ಇದ್ದು ಗಾಳಿ ವೇಗ ಜಾಸ್ತಿ ಇದ್ರೆ ಅಥವಾ ಡ್ರೋನ್ ಬ್ಯಾಟರಿ ಚಾರ್ಜ್ ಕಡಿಮೆಯಾದ ಸಂದರ್ಭದಲ್ಲಿ ತಾನೇ ಅದನ್ನ ತಿಳಿದುಕೊಂಡು ಹಾರಾಟ ಪ್ರಾರಂಭಿಸಿದ ಸ್ಥಳಕ್ಕೆ ವಾಪಸ್ಸಾಗುತ್ತದೆ.

ಇನ್ನು ಡ್ರೋನ್‌ನಲ್ಲಿ ಸೆನ್ಸರ್ ವ್ಯವಸ್ಥೆ ಸಹ ಇದ್ದು ಹಾರಾಡುತ್ತಿರುವ ವೇಳೆ ಎದುರಿಗೆ ಪಕ್ಷಿಗಳು ಅಥವಾ ಯಾವುದೇ ಅಡೆತಡೆ ಬಂದಲ್ಲಿ ಅದನ್ನ ತಾನೇ ಗುರುತಿಸಿಕೊಂಡು ಪಕ್ಕಕ್ಕೆ ಸರಿಯುತ್ತದೆ. ಇನ್ನು ಈ ಆಧುನಿಕ ಡ್ರೋನ್ ಅನ್ನು ಪೊಲೀಸ್ ಇಲಾಖೆ ಬಳಕೆ ಮಾಡಲಿದ್ದು ಸಿವಿಲ್, ಡಿಎಆರ್, ವೈರ್‌ಲೆಸ್ ಸೇರಿ ಇಲಾಖೆಯ 6 ಮಂದಿಗೆ ತರಬೇತಿಯನ್ನ ನೀಡಲಾಗಿದೆ. ಇನ್ನು ಭೌಗೋಳಿಕವಾಗಿ ವಿಶಾಲವಾಗಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ತುರ್ತು ಸಹಾಯಕ್ಕಾಗಿ ಡ್ರೋನ್ ಅವಶ್ಯಕತೆ ಇದ್ದು ಸದ್ಯ ಖರೀದಿಸಿರುವ ಡ್ರೋನ್‌ನ್ನ ಸಮರ್ಪಕವಾಗಿ ಬಳಸಬೇಕು ಅಂತಾ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಾರಿ ನೆರೆ ಉಂಟಾಗಿದ್ದ ಸಂದರ್ಭದಲ್ಲಿ ಅರಣ್ಯ ಪ್ರದೇಶಗಳಲ್ಲಿದ್ದ ಗ್ರಾಮಗಳಿಗೆ ನೆರವು ನೀಡಲು ಪೊಲೀಸರೇ ನೆರೆ ಪರಿಸ್ಥಿತಿ ನಡುವೆ ಜೀವ ಒತ್ತೆ ಇಟ್ಟುಕೊಂಡು ತೆರಳಿದ್ದರು. ಹೀಗಾಗಿ ಬಹುತೇಕ ಎಲ್ಲ ಸಂದರ್ಭಗಳಲ್ಲಿ ಅವಘಡಗಳು ಸಂಭವಿಸಿದಾಗ ಪೊಲೀಸರೇ ಮೊದಲು ನೆರವಿಗೆ ಬರುವ ಹಿನ್ನಲೆ ಡ್ರೋನ್ ನಿರ್ವಹಣೆಯನ್ನೂ ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ನೀಡಿದೆ.

ಒಟ್ಟಿನಲ್ಲಿ ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿಯನ್ನ ಪರಿಶೀಲಿಸಿ ಸೂಕ್ತ ನೆರವನ್ನು ಒದಗಿಸಲು ಉತ್ತರಕನ್ನಡ ಪೊಲೀಸ್ ಇಲಾಖೆಗೆ ಇದೀಗ ಡ್ರೋನ್ ಬಲ ಬಂದಂತಾಗಿದೆ. ಇದರಿಂದ ಅವಘಡಗಳಾದ ಸಂದರ್ಭದಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಸಾಕಷ್ಟು ಸಹಕಾರಿಯಾಗಲಿದ್ದು ಡ್ರೋನ್‌ನ ಸಮರ್ಪಕ ಬಳಕೆಯಾಗಲಿ ಎನ್ನುವುದೇ ಎಲ್ಲರ ಆಶಯ.

Comments are closed.