ಉಡುಪಿ: ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರಿ ಮಳೆಗೆ ಶೇಡಿಮನೆ ಗ್ರಾಮದ ಅರಸಮ್ಮಕಾನು ಸಮೀಪದ ಕೋಟೆರಾಯನ ಬೆಟ್ಟದ ಒಂದು ಭಾಗ ಕುಸಿದ ಹಿನ್ನೆಲೆ ಜನರನ್ನು ಆತಂಕಕ್ಕೀಡು ಮಾಡಿದೆ. ಪಶ್ಚಿಮಘಟ್ಟಕ್ಕೆ ಹೊಂದಿಕೊಂಡ ಕೋಟೆರಾಯನ ಬೆಟ್ಟದ ಮಧ್ಯ ಭಾಗದಿಂದ 3 ಕಿ.ಮೀ ತನಕ ಗುಡ್ಡ ಜರಿದು, ಹಳ್ಳ ನಿರ್ಮಾಣವಾಗಿ ಸುತ್ತಮುತ್ತಲಿನಿಂದ ಧಾರಾಕಾರ ನೀರು ಹರಿಯುತ್ತಿದೆ.
ಉಡುಪಿ ಹಾಗೂ ಶಿವಮೊಗ್ಗ ಗಡಿ ಭಾಗದಲ್ಲಿ ಕೋಟೆರಾಯನ ಬೆಟ್ಟವಿದ್ದು ತಾಲೂಕಿನ ಮಡಾಮಕ್ಕಿಯಿಂದ 5 ಕಿ.ಮೀ ಮತ್ತು ಶೇಡಿಮನೆ ಗ್ರಾಮದ ಅರಸಮ್ಮಕಾನು ಸಮೀಪದ ಅಗಳಿಬೈಲಿನಿಂದ 3 ಕಿ.ಮೀ.ದೂರದಲ್ಲಿದೆ. ಕೋಟೆರಾಯನ ಬೆಟ್ಟದ ತಳ ಭಾಗಕ್ಕೆ ಹೊಂದಿಕೊಂಡು ಹಲವಾರು ಮನೆಗಳು, ಕೃಷಿ ಭೂಮಿಗಳಿವೆ. ಗುಡ್ಡ ಝರಿತದಿಂದಾಗಿ ಮಣ್ಣು ಕುಸಿದಿದೆ. ಕೋಟೆರಾಯ ಪಂಚಪೀಟ ಕಾರಣಿಕ ಸ್ಥಳವಾಗಿ ಗುರುತಿಸಿಕೊಂಡಿದೆ. ಅಗಳಿಬೈಲು ಶಿಲಾಮಯ ದೇವಸ್ಥಾನವೂ ಕೂಡ ಶಿಥಿಲಗೊಂಡಿದ್ದು ಅಲ್ಲಿಂದ ಕೋಟೆರಾಯನ ತುರ (ಬೆಟ್ಟದ ತುದಿ)ಕ್ಕೆ ಹೋಗುವ ಪ್ರದೇಶದಲ್ಲಿ ಈ ಕುಸಿತ ಉಂಟಾಗಿದೆ.
ಈ ಬೆಟ್ಟದ ಮೇಲೆ ಪುರಾತನ ಕೋಟೆರಾಯನ ವಿಗ್ರಹ, ದೇವಸ್ಥಾನ, ಕೋಟೆಗಳು ಹಾಗೂ ಇನ್ನಿತರ ಕುರುಹುಗಳಿವೆ. ಮಳೆಗೆ ಕುಸಿದ ಗುಡ್ಡದ ಭಾಗವು ಕೋಟೆರಾಯನ ಬೆಟ್ಟದ ಇನ್ನೊಂದು ಗುಡ್ಡದ ಭಾಗವಾಗಿದೆ. ಐತಿಹಾಸಿಕ ಕುರುಹುಗಳಿಗೆ ಹಾಗೂ ದೇವಸ್ಥಾನಕ್ಕೆ ಹಾನಿ ಸಂಭವಿಸಿಲ್ಲ.
Comments are closed.