ಉಡುಪಿ: ನಗರವನ್ನು ಸ್ವಚ್ಛವಾಗಿರಿಸುವಲ್ಲಿ ನಿಷ್ಠೆಯಿಂದ ಕೆಲಸ ಮಾಡುವ ಪೌರಕಾರ್ಮಿಕರ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು. ಅವರು ಬುಧವಾರ ಅಜ್ಜರಕಾಡು ಪುರಭವನದ ಮಿನಿ ಸಭಾಂಗಣದಲ್ಲಿ ನಗರಸಭಾ ವತಿಯಿಂದ ನಡೆದ ಪೌರ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪೌರ ಕಾರ್ಮಿಕರಿಲ್ಲದೆ ನಗರ ಸ್ವಚ್ಛವಾಗಿರಿಸಲು ಸಾಧ್ಯವೇ ಇಲ್ಲ. ಉಡುಪಿ ಜಿಲ್ಲೆಯು ಸ್ವಚ್ಛ ಸರ್ವೆಕ್ಷಣ ಸ್ವಚ್ಛತಾ ರ್ಯಾಂಕ್‌ನಲ್ಲಿ ರಾಜ್ಯದಲ್ಲಿಯೇ 9 ನೇ ಸ್ಥಾನದಲ್ಲಿದ್ದು ಮುಂದಿನ ವರ್ಷ ಮೊದಲ ಮೂರು ಪಟ್ಟಿಯಲ್ಲಿ ಸ್ಥಾನ ಪಡೆಯುವ ಆಶಯವಿದೆ ಎಂದರು. ಕೋವಿಡ್ ಸಂಧರ್ಭದಲ್ಲಿ ಪೌರಕಾರ್ಮಿಕರು ಅಂತಿಮ ಶವ ಸಂಸ್ಕಾರ ಮಾಡಲು ಧೈರ್ಯದಿಂದ ಮುಂದೆ ಬಂದಿದ್ದು ಅಲ್ಲಿಯು ತಮ್ಮ ಸೇವೆಯನ್ನು ನೀಡಿದ್ದಾರೆ ಎಂದರು.
ಪೌರ ಕಾರ್ಮಿಕರು ವೈಯಕ್ತಿಕ ಸ್ವಚ್ಛತೆಗೂ ಆದ್ಯತೆಯನ್ನು ನೀಡಿ ಸ್ವಚ್ಛತೆ ಮಾಡುವ ಮುನ್ನ ತಮ್ಮ ಆರೋಗ್ಯದತ್ತ ಗಮನ ಹರಿಸಬೇಕು. ಸ್ವಚ್ಛತೆ ಮಾಡುವಾಗ ಅಗತ್ಯ ಮುಂಜಾಗೃತಾ ಕ್ರಮ ಕೈಗೊಂಡು ಕೆಲಸಕ್ಕೆ ತೆರಳುವಾಗ ಕೈ ಕವಚ ಹಾಗೂ ಇನ್ನಿತರ ಅಗತ್ಯ ರಕ್ಷಣಾ ಕವಚಗಳನ್ನು ಧರಿಸಬೇಕು ಎಂದರು.
ಕಳೆದ ಎರಡು ದಿನಗಳ ಹಿಂದೆ ಉಡುಪಿಯಲ್ಲಿ ಸುರಿದ ಮಳೆಯಿಂದ ಮನೆಗಳು ಜಲಾವೃತಗೊಂಡಿದ್ದವು. ಈ ಸಂಧರ್ಭದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ವಯಂ ಸೇವಕರ ಸೇವಾ ಮನೋಭಾವದಿಂದ ಉತ್ತಮ ಪರಿಹಾರ ಕಾರ್ಯಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗೆ ನೀಡಲಾಯಿತು. ಪೌರ ಕಾರ್ಮಿಕ ದಿನಾಚರಣೆಯಲ್ಲಿ ಉತ್ತಮ ಸೇವೆ ನೀಡುತ್ತಿರುವ ಪೌರಕಾರ್ಮಿಕರನ್ನು ಹಾಗೂ ನೈರ್ಮಲ್ಯ ಮೇಲ್ವಿಚಾರಕರನ್ನು ಸನ್ಮಾನಿಸಲಾಯಿತು.
ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್ ರಾಜ್, ಆರೋಗ್ಯ ನಿರೀಕ್ಷಕ ಕರುಣಾಕರ, ಮತ್ತಿತರರು ಉಪಸ್ಥಿತರಿದ್ದರು.
Comments are closed.