ಉಡುಪಿ: ಮಣಿಪಾಲ ಮತ್ತು ಉಡುಪಿ ಭಾಗದಲ್ಲಿ ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವರನ್ನು ಅಡ್ಡಗಟ್ಟಿ ಹಣ ಮೊಬೈಲ್ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾಪು ಬಳಿಯ ಮಲ್ಲಾರು ಕೊಂಬುಗುಡ್ಡೆಯ ಆಶಿಕ್ (19) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.
ಸೆ.19ರಂದು ತಡರಾತ್ರಿ ಮಣಿಪಾಲ ಮತ್ತು ಉಡುಪಿ ಸುತ್ತಮುತ್ತಲಿನ ಭಾಗದಲ್ಲಿ ಬೈಕ್ ನಲ್ಲಿ ಹೋಗುವವರನ್ನು ಚೂರಿ ತೋರಿಸಿ ಬೆದರಿಸಿ ಹಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಮೂರು ಮತ್ತು ಉಡುಪಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು.
ಆರೋಪಿ ಆಶೀಕ್ ಶನಿವಾರ ರಾತ್ರಿ ಮತ್ತೆ ಸುಲಿಗೆಗೆಂದು ಉಡುಪಿ- ಮಣಿಪಾಲ ಪರಿಸರದಲ್ಲಿ ತಿರುಗಾಡುತ್ತಿದ್ದಾಗ ಖಚಿತ ವರ್ತಮಾನದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಬೈಕ್, ಚೂರಿ, ಸ್ಕ್ರೂ ಡ್ರೈವರ್, ಮತ್ತು ದೋಚಿದ್ದ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಕೊಲೆ ಯತ್ನದಲ್ಲೂ ಭಾಗಿ….
ಮಣಿಪಾಲ ದರೋಡೆಯ ಬಳಿಕ ಸೆ.20ರಂದು ಕಾಪು ಬಳಿಯ ಮಲ್ಲಾರಿನಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಈತನೂ ಭಾಗಿಯಾಗಿದ್ದ. ಮಲ್ಲಾರಿನ ಅಬ್ದುಲ್ ಸತ್ತಾರ್ ಎಂಬವರನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರಿನಲ್ಲಿ ದಾಳಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Comments are closed.