ಕರಾವಳಿ

ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ: ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಷ

Pinterest LinkedIn Tumblr

ಕುಂದಾಪುರ: ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಶಾಸ್ತ್ರಿ ಸರ್ಕಲ್‍ನಿಂದ ಬಸ್ರೂರು ಮೂರುಕೈ ಮತ್ತು ಟಿ.ಟಿ ರಸ್ತೆ ಅಂಡರ್ ಪಾಸ್‍ ಅನ್ನು ಸಂಚಾರಕ್ಕೆ ಕೂಡಲೇ ಮುಕ್ತಗೊಳಿಸಬೇಕು ಹಾಗೂ ಕೆಇಬಿ ಕಚೇರಿ ಎದುರುಗಡೆ ಪಾದಚಾರಿ ಮಾರ್ಗಕ್ಕೆ ಅವಕಾಶ ಮಾಡಿಕೊಡಲು ಒತ್ತಾಯಿಸಿ ಡಿವೈಎಫ್‍ಐ ತಾಲೂಕು ಸಮಿತಿ ನೇತೃತ್ವದಲ್ಲಿ ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ಸಹಕಾರದೊಂದಿಗೆ ಬೃಹತ್ ಧರಣಿ ಸತ್ಯಾಗ್ರಹ ನಡೆಯಿತು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುರೇಶ ಕಲ್ಲಾಗರ ಮಾತನಾಡಿ, ಕುಂದಾಪುರದಲ್ಲಿ ಹಲವು ವರ್ಷದಿಂದ ಚತುಷ್ಪಥ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಗುತ್ತಿಗೆ ಕಂಪೆನಿ ಸರ್ಕಾರಕ್ಕಿಂತ ಬಲವಾಗಿ ಬೆಳೆದಿದೆ. ಜಿಲ್ಲಾಡಳಿತ, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ವೈಫಲ್ಯದಿಂದ ಕುಂದಾಪುರದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಈಗ ನಡೆಯುತ್ತಿರುವ ಕಾಮಗಾರಿ ನಾಗರಿಕರಿಗೆ ಸಮಸ್ಯೆ ತಂದೊಡ್ಡುತ್ತಿವೆ. ಎರಡು ಅಂಡರ್ ಪಾಸ್‍ಗಳನ್ನು ಸಂಚಾರಕ್ಕೆ ಮುಕ್ತ ಮಾಡದೇ ಗಾಂಧಿ ಮೈದಾನದ ಹತ್ತಿರ ಬಂದ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಶಾಲೆಗಳು, ಸರ್ಕಾರಿ ಕಛೇರಿಗಳಿದ್ದು ಪ್ರಮುಖವಾದ ಬೊಬ್ಬರ್ಯ ದೇವಸ್ಥಾನವಿದೆ. ಆದರೆ ಇದ್ಯಾವುದರ ಕನಿಷ್ಟ ಜ್ಞಾನವೂ ಸಂಬಂಧಪಟ್ಟವರಿಗೆ ಇಲ್ಲದ ಜನಪ್ರತಿನಿಧಿಗಳು, ಅಧಿಕಾರಿಗಳ ನಡೆ ಸರಿಯಲ್ಲ ಎಂದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ.ಶಂಕರ ಮಾತನಾಡಿ, ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹಾರ ಆಗದೇ ಇದ್ದರೆ ತೀವ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮಾತನಾಡಿ, ಸರ್ಕಾರ ಹಿಂದೆ ಮನಸ್ಸು ಮಾಡಿದ್ದರೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾಡುವಂತೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ವಿನಾಯಕ ಜಂಕ್ಷನ್ ತನಕ ಮೇಲ್ಸೇತುವೆ ಮಾಡಬಹುದಿತ್ತು. ಈಗ ಇಲ್ಲಿ ಜನರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಅನಗತ್ಯವಾಗಿ ಸಾಕಷ್ಟು ದೂರ ಹೆಚ್ವುವರಿಯಾಗಿ ಸಂಚರಿಸಬೇಕಾಗಿದೆ. ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ, ಸಂಬಂಧಪಟ್ಟ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಸಂಸದರು ಒಂದು ವಾರ ಇಲ್ಲಿ ಇದ್ದು ಖುದ್ದಾಗಿ ಅವರೇ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ಜನ ಪಟ್ಟು ಹಿಡಿಯಬೇಕಾಗಿದೆ ಎಂದರು.

ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ, ಕುಂದಾಪುರ ಪುರಸಭೆ ಸದಸ್ಯ ಚಂದ್ರಶೇಖರ ಖಾರ್ವಿ, ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಚಂದ್ರಶೇಖರ ವಿ., ಸಿಐಟಿಯುನ ಮುಖಂಡರಾದ ಮಹಾಬಲ ವಡೇರಹೋಬಳಿ, ಬಾಲಕೃಷ್ಣ ಶೆಟ್ಟಿ, ಸಮುದಾಯ ಸಂಘಟನೆಯ ಬಾಲಕೃಷ್ಣ ಕೆ., ಜನವಾದಿ ಮಹಿಳಾ ಸಂಘಟನೆಯ ಆರತಿ, ಶೀಲಾವತಿ, ಆದಿವಾಸಿ ಸಂಘಟನೆಯ ಶ್ರೀಧರ ನಾಡ, ನಾಗರತ್ನ ನಾಡ, ಡಿವೈಎಫ್‍ಐ ಗಣೇಶ ದಾಸ್, ಕಿರಣ್, ರವಿ ಬೀಡಿ ಕಾರ್ಮಿಕರ ಸಂಘಟನೆಯ ಬಲ್ಕಿಸಾ ಬಾನು ಮೊದಲಾದವರು ಉಪಸ್ಥಿತರಿದ್ದರು.
ಡಿವೈಎಫ್‍ಐ ಅಧ್ಯಕ್ಷ ರಾಜೇಶ ವಡೇರಹೋಬಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಧರಣಿಗೂ ಮೊದಲು ಪ್ರತಿಭಟನಾ ಮೆರವಣಿಗೆ ನಡೆಯಿತು. ಇದೇ ವೇಳೆ ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ಬೇಡಿಕೆ ಈಡೇರಿಕೆ ಕುರಿತು ಮನವಿ ಸಲ್ಲಿಸಲಾಯಿತು.

Comments are closed.