ಉಡುಪಿ: ಭ್ರೂಣಲಿಂಗ ಪತ್ತೆ ಮಾಡುವುದು ಶಿಕ್ಷರ್ಹ ಅಪರಾಧವಾಗಿದ್ದು, ವೈದ್ಯರು ಭ್ರೂಣಲಿಂಗ ಪತ್ತೆ ಮಾಡಿದ್ದಲ್ಲಿ ಅಂತವರಿಗೆ ಮೊದಲ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ಗಳವರೆಗೆ ದಂಡ ಹಾಗೂ ಇದೇ ಅಪರಾಧ ಮತ್ತೊಮ್ಮೆ ಮಾಡಿದ್ದಲ್ಲಿ 5 ವರ್ಷಗಳ ವರೆಗೆ ಜೈಲು ಶಿಕ್ಷೆ ಜೊತೆಗೆ ರೂ.50,000 ದಂಡ ವಿಧಿಸಲಾಗುತ್ತದೆ. ಅಪರಾಧ ಮುಂದುವರೆದಲ್ಲಿ ಶಾಶ್ವತವಾಗಿ ವೈದ್ಯಕೀಯ ಮಂಡಳಿಯಿಂದ ಹೆಸರು ತೆಗೆದುಹಾಕಲಾಗುವುದು. ಮಹಿಳೆ, ಆಕೆಯ ಪತಿ, ಅವರ ಸಂಬಧಿಕರು ಭ್ರೂಣಲಿಂಗ ಪತ್ತೆಗೆ ಒತ್ತಾಯಿಸಿದ್ದಲ್ಲಿ ಅವರೂ ಶಿಕ್ಷಗೆ ಒಳಪಡುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಹೇಳಿದರು.
ಅವರು ಬುಧವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಶ್ರೀ ಕೃಷ್ಣ ಸಭಾಂಗಣದಲ್ಲಿ, ಜಿಲ್ಲಾ ಆಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಸಕ್ಷಮ ಪ್ರಾಧಿಕಾರ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಉಡುಪಿ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕವಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಗರ್ಭದಲ್ಲಿ ಇರುವ ಮಗು ಗಂಡು ಅಥವಾ ಹೆಣ್ಣು ಎಂದು ಪತ್ತೆ ಹಚ್ಚುವ ಯಂತ್ರಗಳನ್ನು ನಿಷೇಧಿಸಬೇಕು. ಭ್ರೂಣಲಿಂಗ ಪತ್ತೆ, ಭ್ರೂಣ ಲಿಂಗ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜಾಹಿರಾತುಗಳನ್ನು ಕಾಯ್ದೆಯಲ್ಲಿ ನಿಷೇಧಿಸಿದೆ ಎಂದರು. ಪ್ರಾಚೀನ ಕಾಲದಿಂದಲೂ ಹೆಣ್ಣುಮಕ್ಕಳ ದೌರ್ಜನ್ಯ, ಕೃತ್ಯಗಳ ಪ್ರಕರಣಗಳು ಹೆಚ್ಚಾಗಿದ್ದು, ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಏಡ್ಸ್ ಇರುವ ಗರ್ಭಿಣಿ ಮಹಿಳೆಗೆ ಗರ್ಭದಲ್ಲಿರುವಾಗಲೇ ಮಗುವಿಗೆ ಚಿಕಿತ್ಸೆ ಕೊಡಬೇಕು ಎಂದರು.ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಎಲ್ಲಾ ಚಿಕಿತ್ಸಾಲಯಗಳು, ಜೆನೆಟಿಕ್ ಕ್ಲೀನಿಕ್ಗಳು ಹಾಗೂ ಜೆನೆಟಿಕ್ ಪ್ರಯೋಗಾಲಯಗಳು ಸಂಬಂಧಪಟ್ಟ ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಇಲ್ಲದಿದ್ದಲ್ಲಿ ಅವರ ಮೇಲೂ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾನೂನಿನ ಅರಿವು, ಕಾನೂನಿನ ಉದ್ದೇಶ ಗೊತ್ತಿದ್ದರೆ ಹೆಣ್ಣು ಭ್ರೂಣ ಹತ್ಯೆ ಹಾಗೂ ಗಂಡು-ಹೆಣ್ಣಿನ ಲಿಂಗ ಅನುಪಾತ ಸರಿ ಹೋಗಲು ಸಾಧ್ಯ ಎಂದು ನ್ಯಾ.ಕಾವೇರಿ ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮ್ ರಾವ್. ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಇದರ ಬಗ್ಗೆ ಪ್ರತಿ ವರ್ಷ ಅರಿವನ್ನು ಮೂಡಿಸುತ್ತಿದ್ದೇವೆ. ಆದರೂ ಕೂಡ ಉಡುಪಿಯಂತಹ ಬುದ್ಧಿವಂತರ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆದ್ದರಿಂದ ಗ್ರಾಮ ಗ್ರಾಮಕ್ಕೂ ಕಾನೂನಿನ ಅರಿವನ್ನು ಮೂಡಿಸುವಂತಹ ಕೆಲಸ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಎಂದರು. ಹುಟ್ಟುವಂತಹ ಮಕ್ಕಳು ಆರೋಗ್ಯಯುತವಾಗಿ ಜನನವಾಗಲು ಮತ್ತು ಮಗುವಿನ ಅಂಗವಿಕಲತೆ ತಡೆಯಲು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಕೆಲ ವೈದ್ಯರು ಭ್ರೂಣ ಲಿಂಗ ಪತ್ತೆ ಮಾಡಲು ದುರುಪಯೋಗಪಡಿಸಿಕೊಳ್ಳುತ್ತಾರೆ.
ಜಿಲ್ಲೆಯಲ್ಲಿ 73 ಸ್ಕ್ಯಾನಿಂಗ್ ಸೆಂಟರ್ಗಳಿವೆ. ಆಸ್ಪತೆಗಳಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವುದಿಲ್ಲ ಎಂದು ಕಡ್ಡಾಯವಾಗಿ ನಾಮಫಲಕಗಳು ಹಾಕುವುದರಿಂದ ಜನರಲ್ಲಿಜಾಗೃತಿ ಮೂಡಿಸಬಹುದು ಎಂದರು. ಯಾವುದೇ ಸಂಸ್ಥೆಯವರು ಭ್ರೂಣ ಲಿಂಗ ಪತ್ತೆ ಮಾಡುವುದು ಕಂಡು ಬಂದಲ್ಲಿ ಅಥವಾ ಭ್ರೂಣ ಲಿಂಗ ಪತ್ತೆ ಮಾಡುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ, ಅದರ ಸಾಕ್ಷಾಧಾರಗಳು ಇದ್ದು ದೂರು ನೀಡಿದರೆ ಅಂತವರಿಗೆ 5,00,000 ಬಹುಮಾನ ನೀಡಲಾಗುವುದು ಹಾಗೂ ಇಂತಹ ದೂರುಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೂ ನೀಡುವಂತೆ ತಿಳಿಸಿದರು.
ಜಿಲ್ಲಾ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಸಲಹಾ ಸಮಿತಿಯ ಪ್ರಸೂತಿ ತಜ್ಞ ಡಾ.ಪ್ರತಾಪ್ ಕುಮಾರ್, ಭ್ರೂಣ ಲಿಂಗ ಪತ್ತೆ ಕಾಯದೆ ಕುರಿತ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಬೇರೆ ಬೇರೆ ರೀತಿಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಭ್ರೂಣ ಪತ್ತೆ ಮಾಡಲು ಪ್ರಯತ್ನಿಸಬೇಡಿ ಎಂದರು. ವೈದ್ಯರುಗಳು ಇಂತಹ ಕೃತ್ಯಕ್ಕೆ ಪ್ರಯತ್ನ ಪಡಬಾರದು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ಭ್ರೂಣಲಿಂಗ ಪತ್ತೆಯ ಬಗ್ಗೆ ದೂರುಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಸಾರ್ವಜನಿಕರು ನಕಲು ವೈದ್ಯರುಗಳನ್ನು ನಂಬಿ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಎಂದರು. ಗಂಡು ಹೆಣ್ಣು ಎಂಬ ತಾರತಮ್ಯ ಮಾಡದೇ ಮಗುವನ್ನು ಸಹಜವಾಗಿ ದೈಹಿಕವಾಗಿ ಸರಿಯಿದ್ದರೆ ಸಾಕು ಎಂದು ಭಾವಿಸಬೇಕು. ಗಂಡು ಹೆಣ್ಣು ಎಂಬ ಭೇದ-ಬಾವ ಮಾಡದೇಇಬ್ಬರಿಗೂ ಶಿಕ್ಷಣವನ್ನು ನೀಡಬೇಕು ಎಂದರು.
ಕಾರ್ಯಾಗಾರದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ, ಆಶಾ ಕಾರ್ಯಕರ್ತೆಯರು, ಮೆಂಟರ್ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ಧರು.ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ವಂದಿಸಿ, ನಿರೂಪಿಸಿದರು,
Comments are closed.