ಕುಂದಾಪುರ: ದಿನದಿಂದ ದಿನಕ್ಕೆ ಗ್ರಾಮೀಣ ಭಾಗಗಳಿಗೆ ವಿಸ್ತರಣೆಯಾಗುತ್ತಿರುವ ಕೊರೊನಾ ವೈರಾಣು ದಾಳಿಯನ್ನು ಯಾರು ಕೂಡ ಲಘುವಾಗಿ ಪರಿಗಣಿಸಬಾರದು. ಕೊರೊನಾ ನಿರ್ಮೂಲನೆಗಾಗಿ ಶಾಸಕರು, ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕಾದ ಅನೀವಾರ್ಯತೆ ಇದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಕೊರೊನಾ ನಿರ್ವಹಣೆ ಹಾಗೂ ತೌಕ್ತೇ ಚಂಡಮಾರುತ ಹಾನಿ ಪರಿಶಿಲನೆ ಕುರಿತಾಗಿ ನಡೆದ ವಂಡ್ಸೆ ಹೋಬಳಿ ಮಟ್ಟದ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಗ್ರಾಮ ಕರಣೀಕರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಬಾರಿ ಕೊರೊನಾ ಅಲೆಯ ಸಂದರ್ಭದಲ್ಲಿ ಬೈಂದೂರು ಕ್ಷೇತ್ರವೊಂದಕ್ಕೆ ಹೊರ ಭಾಗಗಳಲ್ಲಿ ಉದ್ಯೋಗ ಹಾಗೂ ವ್ಯವಹಾರಕ್ಕಾಗಿ ತೆರಳಿದ್ದ ಅಂದಾಜು 42 ಸಾವಿರ ಮಂದಿ ಊರಿಗೆ ಹಿಂತಿರುಗಿದ್ದರು. ಅವರಲ್ಲಿ ಕೆಲವರು ಪುನ: ತಮ್ಮ ಕಾರ್ಯ ಕ್ಷೇತ್ರಕ್ಕೆ ಹಿಂತಿರುಗಿರಲಿಲ್ಲ. ಈ ಬಾರಿಯ ಅಲೆಯ ವೇಳೆಯೂ ಸಾಕಷ್ಟು ಮಂದಿ ಊರಿಗೆ ಬಂದಿದ್ದಾರೆ. ಕೋವಿಡ್ ಮಹಾಮಾರಿ ಎಲ್ಲರ ಅನ್ನವನ್ನು ಕಸಿದುಕೊಂಡಿದೆ. ಗ್ರಾಮ ಮಟ್ಟದಲ್ಲಿ ಇದರ ವಿಸ್ತರಣೆಯನ್ನು ಪರಿಣಾಮಕಾರಿಯಾಗಿ ತಡೆಯಬೇಕಾದರೇ ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತೆರಬೇಕು. ಅನಗತ್ಯ ತಿರುಗಾಟಗಳಿಗೆ ಕಡ್ಡಾಯ ಕಡಿವಾಣ ಹಾಕಬೇಕು. ಹೋಂ ಐಸೋಲೇಶನ್ ಇರುವವರು ಹೊರ ಬರದಂತೆ ನಿಗಾ ವಹಿಸಬೇಕು. ಗ್ರಾಮಗಳಲ್ಲಿನ ಕೊರೊನಾ ಟಾಸ್ಕ್ ಪೋರ್ಸ್ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಗ್ರಾಮ ಪಂಚಾಯಿತಿಯವರ ಹಾಗೂ ಸ್ಥಳೀಯ ಯುವಕರ ಸಹಕಾರವನ್ನು ಪಡೆದುಕೊಂಡು ಮನೆ ಮನೆಗಳಿಗೆ ಪಡಿತರ ವಸ್ತುಗಳನ್ನು ತಲುಪಿಸುವ ಕಾರ್ಯಯೋಜನೆ ರೂಪಿಸಿದರೆ, ಪಡಿತರ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವ ಹಾಗೂ ಸೋಂಕು ಹರಡುವ ಸಾಧ್ಯತೆಗಳನ್ನು ನಿಯಂತ್ರಿಸಬಹುದು. ಮೇ.೨೪ ರ ನಂತರವೂ ಲಾಕ್‌ಡೌನ್ ಮುಂದುವರೆಸಲು ಸಾರ್ವಜನಿಕ ಅಭಿಪ್ರಾಯ ಇದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಉಪ ವಿಭಾಗಾಧಿಕಾರಿ ಕೆ.ರಾಜು ಅವರು, ಕೋವಿಡ್ ನಿಯಂತ್ರಣವಾಗಬೇಕಾದರೇ, ಕಟ್ಟು ನಿಟ್ಟಿನ ಕಾನೂನು ಪಾಲನೆಯ ಅಗತ್ಯ ಇದೆ. ಸೋಂಕಿನ ಗುಣ ಲಕ್ಷಣ ಇರುವವರು ಕೂಡಲೇ ವೈದ್ಯಕೀಯ ಸಲಹೆ ಪಡೆದುಕೊಳ್ಳಬೇಕು. ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಬಂದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇದೆ. ಪ್ರತಿ ದಿನವೂ ಆಕ್ಸಿಜನ್ ಪ್ರಮಾಣವನ್ನು ಹೊಂದಿಸಿಕೊಳ್ಳಲು ಅಧಿಕಾರಿಗಳು ಹಾಗೂ ವೈದ್ಯರು ಸಾಕಷ್ಟು ಶ್ರಮ ಹಾಗೂ ಒತ್ತಡವನ್ನು ಅನುಭವಿಸುತ್ತಿದ್ದಾರೆ. ರೋಗಿಗಳು ಸಕಾಲದಲ್ಲಿ ಆಸ್ಪತ್ರೆಗೆ ಬಂದಲ್ಲಿ ಒತ್ತಡಗಳು ಕಡಿಮೆಯಾಗುತ್ತದೆ. ಕಳೆದ ಬಾರಿಯ ಕೊರೊನಾ ಸಂಕಷ್ಟದ ಸಮಯದಲ್ಲಿ ಜಿಲ್ಲೆಯ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದರಿಂದಾಗಿ ಒಂದಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿಸಿಕೊಳ್ಳಲು ಸಾಧ್ಯವಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪ್ರತಿಯೊಬ್ಬರ ಜೀವವನ್ನು ಉಳಿಸಿಕೊಳ್ಳಬೇಕಾದ ಸಾಮೂಹಿಕ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದರು.
ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಕೆ.ಶ್ರೀಕಾಂತ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೇಶವ್ ಶೆಟ್ಟಿಗಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಇದ್ದರು.
Comments are closed.