ಕರಾವಳಿ

ಕುಂದಾಪುರದಲ್ಲಿ ಮೆಡಿಸಿನ್ ಕಿಟ್ ವಿತರಣೆ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ಹೋಂ ಐಸೋಲೇಶನ್ ಅಲ್ಲಿರುವ ಕೋವಿಡ್ ಸೋಂಕಿತರಿಗೆ ಆರೋಗ್ಯ ಇಲಾಖೆ ಮೂಲಕ ಮೆಡಿಸಿನ್ ಕಿಟ್ ಹಾಗೂ ಪುರಸಭಾ ವ್ಯಾಪ್ತಿಯ 8 ಮಂದಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ಕುಂದಾಪುರದ ಶ್ರೀ ಕೀಳೇಶ್ವರಿ ಮತ್ತು ಪರಮೇಶ್ವರಿ ದೇವಸ್ಥಾನದಲ್ಲಿ ಜರುಗಿತು.

ಶ್ರೀ ಕೀಳೇಶ್ವರಿ ದೇವಸ್ಥಾನ, ಶ್ರೀ ಕೀಳೇಶ್ವರಿ ಯೂತ್ ಕ್ಲಬ್ ಸಹಕಾರದಲ್ಲಿ ಡೈನಮಿಕ್ ಇನ್ಫೋಟೆಕ್ ಸಂಸ್ಥೆ, ಬೆಂಗಳೂರು ನಾರಾಯಣ ಹೃದಯಾಲಯದ ವೈದ್ಯರಾದ ಡಾ. ಇಸ್ತಿಯಾಕ್ ಅಹಮ್ಮದ್ ಅವರ ಸಹಕಾರದಲ್ಲಿ 1000 ಮೆಡಿಸಿನ್ ಕಿಟ್ ಅನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ ಅವರಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಡಾ. ನಾಗಭೂಷಣ್ ಉಡುಪ, ಕೊರೋನಾ ಮಹಾಮಾರಿ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಂಘಟಿತ ಹೋರಾಟ‌ ನಡೆಯುತ್ತಿದ್ದು ಆರೋಗ್ಯ ಕಾರ್ಯಕರ್ತರ ಜೊತೆಗೆ ಪೊಲೀಸರು ಹಾಗೂ ಆಶಾ ಕಾರ್ಯಕರ್ತರು ಪ್ರಮುಖ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೋನಾ ಸಾಮಾಜಿಕ ಪಿಡುಗಾಗಿದ್ದು ದೇಶವನ್ನೇ ನಲುಗಿಸುತ್ತಿದೆ.ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರವಿರುವಂತೆ ಕೊರೋನಾ ನಿಯಂತ್ರಣದಲ್ಲಿ ಪ್ರತಿಯೊಬ್ಬ ಸಾರ್ವಜನಿಕನೂ ಕೂಡ ನಮ್ಮ ಮನೆ, ಊರು ಹಾಗೂ ದೇಶದ ರಕ್ಷಣೆಯಲ್ಲಿ ಸೈನಿಕನಾಗಿ ತೊಡಗಿಸಿಕೊಳ್ಳಬೇಕು.ಜನರು ಕೂಡ ಸರಕಾರದ ಆದೇಶ ಪಾಲನೆ ಮಾಡುವ ಅಗತ್ಯವಿದೆ. ಸಮಾಜವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿದ್ದು ಸಂಘಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ಕಳೆದೊಂದು ವರ್ಷದಲ್ಲಿ ಅಂದಾಜು 35 ಲಕ್ಷ ವೆಚ್ಚದ ವಸ್ತುಗಳನ್ನು ದಾನಿಗಳು‌ ನೀಡಿರುವುದು ಶ್ಲಾಘನೀಯ ವಿಚಾರವಾಗಿದೆ. ಕೋವಿಡ್ ನಿಯಂತ್ರಣ, ಪರೀಕ್ಷೆ, ಐಸೋಲೇಶನ್ ಮೊದಲಾದೆಲ್ಲಾ ವಿಚಾರದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕುಂದಾಪುರ ತಾಲೂಕು ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಔಷಧಗಳ ಕೊರತೆಯಿದ್ದರೂ ಕೂಡ ಅದನ್ನು ನಿಬಾಯಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ತಾಲೂಕಿನಲ್ಲಿ 2235 ಹೋಂ ಐಸೋಲೇಶನ್ ಪ್ರಕರಣ ದಾಖಲಾಗಿದೆ. ಆಶಾ ಕಾರ್ಯಕರ್ತೆಯರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸೋಂಕಿತರನ್ನು ಕಟ್ಟಕಡೆಯ ವ್ಯಕ್ತಿಯೆಂದು ತಿಳಿಯದೆ ಮೊಟ್ಟಮೊದಲ ವ್ಯಕ್ತಿ ಎಂದು ಪರಿಗಣಿಸಬೇಕು ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ಕೆ.‌ಶ್ರೀಕಾಂತ್, ಡೈನಮಿಕ್ ಇನ್ಫೋಟೆಕ್ ಸಂಸ್ಥೆ ಪಾಲುದಾರರಾದ ದಿನೇಶ್ ಅಮೀನ್, ಗಣೇಶ್ ಅಮೀನ್, ಧೀರಜ್, ಪುರಸಭೆ ಸದಸ್ಯ ಶ್ರೀಕಾಂತ, ಕೀಳೇಶ್ವರಿ ಯೂತ್ ಕ್ಲಬ್ ಅಧ್ಯಕ್ಷ ಸಂದೇಶ್ ಶೆಟ್ಟಿ, ಕಾರ್ಯದರ್ಶಿ ಸುಧಾಕರ್, ಶ್ರೀ ಕೀಳೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಕಮಲಾಕ್ಷ, ಗಿರೀಶ್ ಜಿ.ಕೆ, ಸಂಜೀವ ಶ್ರೀಯಾನ್, ಗುಣರತ್ನಾ, ಚಂದ್ರ ಮೇಸ್ತ್ರಿ, ಮಹಾಬಲ ಹೊಳ್ಳ, ಭಾಸ್ಕರ ವಿಠಲವಾಡಿ, ಭಾಸ್ಕರ ಎಂ. ವಿಠಲವಾಡಿ, ಪ್ರಮುಖರಾದ ಮಹೇಶ್ ಪೂಜಾರಿ ಹಳೆಅಳಿವೆ, ಭಾಸ್ಕರ ಬಿಲ್ಲವ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.