ಕುಂದಾಪುರ: ಕೋವಿಡ್ ಸಂಕಷ್ಟದ ಸಮಯದಲ್ಲಿ ಸರ್ಕಾರಿ ವ್ಯವಸ್ಥೆಯೊಂದಿಗೆ ಈ ಭಾಗದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ನೀಡಿರುವ ಸಹಕಾರವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಕುಂದಾಪುರದಂತಹ ಉಪ ವಿಭಾಗದಲ್ಲಿ, ಕೋವಿಡ್ ವಿರುದ್ಧದ ಹೋರಾಟದಲ್ಲಿ ದುಡಿಯಲು ಅವಕಾಶ ದೊರಕಿರುವುದು ನನ್ನ ಸರ್ಕಾರಿ ಸೇವೆಯ ಸುವರ್ಣ ದಿನಗಳು ಎಂದು ನಾನು ಭಾವಿಸುವುದಾಗಿ ಉಪ ವಿಭಾಗಾಧಿಕಾರಿ ಕೆ.ರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಬೆಂಗಳೂರು ನಾರಾಯಣ ಹೃದಯಾಲಯದ ವೈದ್ಯ ಡಾ.ಇಸ್ತಿಯಾಕ್ ಅಹಮ್ಮದ್, ಮುಂಬೈ ಉದ್ಯಮಿ ಗಣೇಶ್, ಬೆಂಗಳೂರಿನ ಸೃಜನ್ ಅವರ ನೆರವಿನಿಂದ ಯುಎಸ್ಐ ಯುಎಸ್‌ಐ ಡೆಂಪೆಸ್ಸಿ ವೆಂಚರ್ಸ್ ಕಂಪೆನಿಯ ಸಿಇಓ ಡಾನ್ ಬೊವೆನ್ ಅವರು ಕೊಡ ಮಾಡಿದ ಆಧುನಿಕ ತಂತ್ರಜ್ಞಾನದ ಅನಿಲ ಸಾಂದ್ರಕ, ಡೈನಮಿಕ್ ಇನ್ಫೋಟೆಕ್ ಸಂಸ್ಥೆ ಹಾಗೂ ಕೀಳೇಶ್ವರಿ ಯೂತ್ ಕ್ಲಬ್ ವತಿಯಿಂದ ನೀಡಲಾದ 250 ಕೊರೊನಾ ವೈರಸ್ ಚಿಕಿತ್ಸೆಯ ಔಷಧಿಗಳ ಕಿಟ್‌ಗಳ ಹಸ್ತಾಂತರ ಸಮಾರಂಭದಲ್ಲಿ ಕೊಡುಗೆಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕುಂದಾಪುರದ ಕೋವಿಡ್ ನಿರ್ವಹಣೆಗಾಗಿ ಈ ಭಾಗದ ದಾನಿಗಳು ಅಂದಾಜು 48 ಲಕ್ಷಕ್ಕೂ ಅಧಿಕ ಮೌಲ್ಯದ ಕೊಡುಗೆಗಳನ್ನು ನೀಡಿದ್ದಾರೆ. ಕೋವಿಡ್ ಆಸ್ಪತ್ರೆ ಹಾಗೂ ಮನೆಯಲ್ಲಿ ಐಸೊಲೇಶನ್ ಆಗಿರುವ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಔಷಧಿಗಳನ್ನು ನೀಡಿದ್ದಾರೆ. ಕೊರೊನಾ ಮುಂಚೂಣಿ ವಾರಿಯರ್ಸ್ ಗಳನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ. ಹಸಿದವರಿಗೆ ಹಾಗೂ ಅಶಕ್ತರ ಹೊಟ್ಟೆ ತುಂಬಿಸಿದ್ದಾರೆ. ಒಟ್ಟಿನಲ್ಲಿ ಹೇಳುದಾದರೆ ಕುಂದಾಪುರ ದಾನಿಗಳ ಊರಾಗಿ ಗುರುತಿಸಿಕೊಂಡಿದೆ. ಸರ್ಕಾರ ಹಾಗೂ ಸಾರ್ವಜನಿಕರು ಜತೆಯಾಗಿ ಸಾಗುತ್ತಿರುವುದರಿಂದಾಗಿ ಕುಂದಾಪುರದ ಕೋವಿಡ್ ಆಸ್ಪತ್ರೆ ರಾಜ್ಯದಲ್ಲಿಯೇ ಹೆಚ್ಚು ಕೊರೊನಾ ವೈರಸ್ ಸೋಂಕಿತರನ್ನ ಗುಣ ಪಡಿಸಿರುವ ಉತ್ತಮ ವೈದ್ಯಕೀಯ ತಂಡ ಹಾಗೂ ವ್ಯವಸ್ಥೆಯನ್ನು ಹೊಂದಿರುವ ಆಸ್ಪತ್ರೆಯಾಗಿ ಮೆಚ್ಚುಗೆ ಪಡೆದಿರುವುದು ಕುಂದಾಪುರದವರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಡೈನಮಿಕ್ ಇನ್ಫೋಟೆಕ್ ಸಂಸ್ಥೆಯ ದಿನೇಶ್ ಅಮೀನ್, ಗಣೇಶ್ ಅಮೀನ್, ಧೀರಜ್ ಹೆಜಮಾಡಿ, ಉಪನ್ಯಾಸಕ ಶಶಿಕಾಂತ ಹತ್ವಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ಬಿಲ್ಲವ ಹೇರಿಕುದ್ರು, ಕೀಳೇಶ್ವರಿ ಯೂತ್ ಕ್ಲಬ್ನ ಭಾಸ್ಕರ ಎಂ.ವಿಠಲವಾಡಿ ಹಾಗೂ ಕಮಲಾಕ್ಷ ವಿಠಲವಾಡಿ ಇದ್ದರು.
Comments are closed.