ಕರಾವಳಿ

ಲವ್ ಜಿಹಾದ್, ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬೈಂದೂರಿನಲ್ಲಿ ಹಿಂಜಾವೇ ಪ್ರತಿಭಟನೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಹಿಂದು ಜಾಗರಣ ವೇದಿಕೆ ಬೈಂದೂರು ತಾಲೂಕು ವತಿಯಿಂದ ಬೈಂದೂರು ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಲವ್ ಜಿಹಾದ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿ ಮಾಡುವಂತೆ ಆಗ್ರಹ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಾತೃಸುರಕ್ಷಾ ಸಂಯೋಜಕ್ ವಾಸುದೇವ ಗಂಗೊಳ್ಳಿ ಮಾತನಾಡಿ, ಶೈಕ್ಷಣಿಕ ಆರೋಗ್ಯ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ರಾಜ್ಯದಲ್ಲೆ ಮಾದರಿ ಜಿಲ್ಲೆಗಳು ಎನಿಸಿಕೊಂಡಿರುವ ಕರಾವಳಿಯ ಉಡುಪಿ ಹಾಗೂ ಮಂಗಳೂರು ಸೇರಿದಂತೆ ಕೊಡಗು ಮತ್ತು ಉತ್ತರ ಕನ್ನಡ ಭಾಗದಲ್ಲಿ ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳು ವರದಿಯಾಗಿವೆ. ದೇಶದ ಭದ್ರತೆ ಮತ್ತು ಆಂತರಿಕ ಸುರಕ್ಷತೆಗೆ ಸವಾಲಾಗಿರುವ ಕೆಲವು ಉಗ್ರಗಾಮಿ ಸಂಘಟನೆಗಳು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದಕ್ಕೆ ಕೆಲ ಮತೀಯವಾದಿ ಸಂಘಟನೆಗಳು ನೇರ ಬೆಂಬಲವನ್ನು ನೀಡುತ್ತಿದೆ ಎಂದು ಆರೋಪಿಸಿದರು. ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಮತ್ತು ಉಗ್ರಗಾಮಿ ಕೃತ್ಯಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕಿದೆ. ಮಂಗಳೂರಿನಲ್ಲಿ ಈವರೆಗೆ ನಡೆದಿರುವ ಎಲ್ಲಾ ಭಯೋತ್ಪಾದಕ ಚಟುವಟಿಕೆಗಳು ಮತ್ತು ಕೇರಳ ಮತ್ತು ಭಟ್ಕಳದ ನಂಟು ಹೊಂದಿರುವ ಉಗ್ರಗಾಮಿ ಸಂಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾದಳದ ಕಚೇರಿಯನ್ನು ತೆರೆಯ ಬೇಕೆಂದು ಅವರು ಆಗ್ರಹಿಸಿದರು.

ಈ ಸಂದರ್ಭ ತಾಲೂಕು ಮಾತೃಸುರಕ್ಷಾ ಸಂಯೋಜಕ್ ರತ್ನಾಕರ ಗಂಗೊಳ್ಳಿ , ಹಿಂಜಾವೇ ಬೈಂದೂರು ತಾಲೂಕು ಅಧ್ಯಕ್ಷ ರಾಜೇಶ್ ಆಚಾರ್, ಸಂಘಟನೆಯ ಪ್ರಮುಖರಾದ ಪ್ರಶಾಂತ್ ಮೊಯ್ಲಿ, ಹರೀಶ್ ಸೆಳ್ಕೋಡ್, ವೇದನಾಥ್ ಹೆರಾಂಜಲ್,ನವೀನ್ ಗಂಗೊಳ್ಳಿ, ಉಮೇಶ್ ಬಿಜೂರು, ವಿಜೇತ್,ಶೇಖರ್ ಕಂಬದಕೋಣೆ ಹಾಗೂ ತಾಲೂಕು ಎಲ್ಲಾ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.