ಕರಾವಳಿ

ನಾಡಿನೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಪೊಡವಿಗೊಡೆಯನ ನಾಡು ಉಡುಪಿಯಲ್ಲಿ ನಾಳೆ ವಿಟ್ಲಪಿಂಡಿ

Pinterest LinkedIn Tumblr

ಉಡುಪಿ: ದೇಗುಲ ನಗರಿ ಉಡುಪಿ ಶ್ರೀಕೃಷ್ಣಮಠ ಸಹಿತ ನಾಡಿನೆಲ್ಲೆಡೆ ಸೋಮವಾರ ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ಮಂಗಳವಾರ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಆಚರಣೆ ಸಾಂಪ್ರದಾಯಿಕವಾಗಿ ನಡೆ ಯಲಿದೆ. ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಶ್ರೀಕೃಷ್ಣಾಷ್ಟಮಿ ಆಚರಣೆಗೆ ಅವಕಾಶ ವಿಲ್ಲದ ಕಾರಣ ಶ್ರೀಕೃಷ್ಣ ದೇವಾಲಯಗಳಲ್ಲಿ ಶ್ರೀದೇವರಿಗೆ ಸರಳವಾಗಿ ವಿಶೇಷ ಪೂಜೆ ನೆರವೇರಲಿದೆ. ಮನೆಗಳಲ್ಲಿ ಶ್ರೀ ಕೃಷ್ಣಾಷ್ಟಮಿಯನ್ನು ಶ್ರದ್ಧಾ,ಭಕ್ತಿ, ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಶ್ರೀಕೃಷ್ಣಮಠದಲ್ಲಿ ಆ. 30ರಂದು ಬೆಳಗ್ಗೆ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸಲಿದ್ದಾರೆ. ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ಪೂಜೆಯ ನಿವೇದನೆಗೆ ಉಂಡೆ ಕಟ್ಟುವುದಕ್ಕೆ ಸ್ವಾಮೀಜಿ ಮುಹೂರ್ತ ಮಾಡುವರು. ಹಗಲು ಏಕಾದಶಿಯಂತೆ ನಿರ್ಜಲ ಉಪವಾಸವಿರುವ ಕಾರಣ ರಾತ್ರಿ ಮಹಾಪೂಜೆಯನ್ನೂ ನಡೆಸಿ ಮಧ್ಯರಾತ್ರಿ 12.15ಕ್ಕೆ ಸ್ವಾಮೀಜಿ ಇತರ ಸ್ವಾಮೀಜಿಯವರ ಜತೆಗೂಡಿ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಿದ್ದಾರೆ. ಆ ಬಳಿಕ ಕನಕನ ಕಿಂಡಿ ಎದುರು ಮತ್ತು ವಸಂತ ಮಂಟಪದಲ್ಲಿ ಅರ್ಘ್ಯವನ್ನು ಬಿಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಶ್ರೀಕೃಷ್ಣಮಠವನ್ನು ಪುಷ್ಪಗಳಿಂದ ಸೋಮವಾರ ಅಲಂಕರಿಸಲಾಗುತ್ತದೆ. ಆ. 30ರಂದು ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ, ಆ. 31ರ ಬೆಳಗ್ಗೆ 7.30ರಿಂದ ಮಧ್ಯಾಹ್ನ 1ರ ವರೆಗೆ, ರಥೋತ್ಸವದ ಬಳಿಕ 5 ಗಂಟೆಯಿಂದ ದರ್ಶನಾವಕಾಶವಿದೆ. ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ದರ್ಶನ ಪಡೆಯಬೇಕು. ಯಾತ್ರಾರ್ಥಿಗಳು ವಿಶ್ವಪಥದ ಮೂಲಕ, ಸುದರ್ಶನ ಪ್ರವೇಶ ಪತ್ರ ಹೊಂದಿದ ಸ್ಥಳೀಯರು ಉತ್ತರ ಮತ್ತು ದಕ್ಷಿಣ ದ್ವಾರದಿಂದ ದರ್ಶನ ಪಡೆಯಬಹುದು.

ಕೊರೊನಾ ಕಾರಣದಿಂದ ಜನರ ನೂಕುನುಗ್ಗಲಿಗೆ ಅವಕಾಶ ಕೊಟ್ಟಿಲ್ಲ. ಇದೇ ಕಾರಣದಿಂದ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಈ ವರ್ಷವೂ ಏರ್ಪಡಿಸಿಲ್ಲ. ಸರಕಾರದ ನಿಯಮಾ ನುಸಾರ ವಿಟ್ಲಪಿಂಡಿ ಉತ್ಸವದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಿಲ್ಲ. ಮಠದ ಸಿಬಂದಿ, ಗೋಪಾಲಕರು ಮಾತ್ರ ಭಾಗವಹಿಸಿ ಮೊಸರುಕುಡಿಕೆ ಉತ್ಸವವನ್ನು ಆಚರಿಸಲಿದ್ದಾರೆ.

ಶ್ರೀಕೃಷ್ಣಮಠದ ಎಲ್ಲ ಪೂಜೆ, ಉತ್ಸವಗಳನ್ನು ಆನ್‌ಲೈನ್‌ನಲ್ಲಿ ಬಿತ್ತರಿಸಲಾಗುತ್ತಿದೆ. ವಿವಿಧ ಸಂಘಟನೆಗಳು ಆನ್‌ಲೈನ್‌ ಸ್ಪರ್ಧೆಗಳನ್ನು ಏರ್ಪ ಡಿಸಿವೆ. ಮನೆಗಳಲ್ಲಿ ಕೃಷ್ಣಾಷ್ಟಮಿ ಆಚರಿಸು ವವರು ಮಾರುಕಟ್ಟೆಗಳಿಂದ ಬೇಕಾದ ಸಾಮಗ್ರಿಗಳನ್ನು ಖರೀದಿಸಿದ್ದು ಪೂಜೆ, ಭಜನೆ, ಅರ್ಘ್ಯಪ್ರದಾನಗಳಿಂದ ಕೃಷ್ಣಜಯಂತಿಯನ್ನು ನಡೆಸುತ್ತಿದ್ದಾರೆ.

Comments are closed.