ಕುಂದಾಪುರ: ಇಲ್ಲಿನ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಪುರಸಭೆಯಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಗಾಗಿ ನಡೆದ ಭೂಮಿ ಖರೀದಿಯಲ್ಲಿ ಅವ್ಯವಹಾರವಾಗಿದೆ ಎನ್ನುವ ಸದಸ್ಯ ಗಿರೀಶ್ ಜಿ.ಕೆ ಅವರ ಆರೋಪದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು.
ಬುಧವಾರ ಸಂಜೆ ನಡೆದ ಪುರಸಭೆಯ ಸಮಾನ್ಯ ಸಭೆಗೆ ಆಗಮಿಸಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ವೇದಿಕೆಯನ್ನು ಅಲಂಕರಿಸದೆ, ಪುರಸಭೆಯ ಸದಸ್ಯರ ಸಾಲಿನಲ್ಲಿ ಕುಳಿತುಕೊಂಡು ಸಭೆಯ ಕಲಾಪದಲ್ಲಿ ಭಾಗಿಯಾದರು.
ನೀವು ಏನು ಹೇಳಬೇಕೋ ಅದನ್ನು ಕಾನೂನು ಬದ್ದ ಬರವಣಿಗೆಯಲ್ಲಿ ಕೊಡಿ ಎಂದು ಸಭೆಯಲ್ಲಿ ಸೂಚಿಸಿದ ಶಾಸಕರು, ಯುಜಿಡಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆಗೆ ಬೆಂಬಲವಿದೆ. ತನಿಖೆ ಯಾರಿಂದ ಆಗಬೇಕು ಎನ್ನುವುದನ್ನು ಸಭೆ ನಿರ್ಧರಿಸಲಿ ಎಂದರು. ಈ ವಿಚಾರದ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಚಂದ್ರಶೇಖರ ಖಾರ್ವಿ ಹಾಗೂ ಆಶ್ಫಕ್ ಕೋಡಿ, ಭೂಮಿ ವಿಕ್ರಯ ಬಗ್ಗೆ ಹಿಂದಿನ ಸಭೆಯಲ್ಲಿ ತನಿಖೆಗೆ ಸರ್ವಾನುಮತದ ನಿರ್ಣಯ ಎಂದು ಬರೆಯಲಾಗಿದೆ. ವಿರೋಧದ ಕುರಿತು ಪತ್ರ ನೀಡಲಾಗಿದ್ದು, ಸರ್ವಾನುಮತ ಎನ್ನುವ ಬದಲು ಬಹುಮತದ ನಿರ್ಣಯ ಎಂದು ತಿದ್ದುಪಡಿ ದಾಖಲಿಸುವಂತೆ ಹೇಳಿದರು. ಸದಸ್ಯರ ಅಭಿಪ್ರಾಯ ಪಡೆದ ಬಳಿಕ, ಲಾಗ್ ಪುಸ್ತಕದಲ್ಲಿ ಬಹುಮತದ ತೀರ್ಮಾನ ಎಂದು ಬರೆಸಲು ನಿರ್ಧರಿಸಲಾಯಿತು.
ಭೂ ವಿಕ್ರಯದ ಕುರಿತು ಕೇಳಿದ ಮಾಹಿತಿಗೆ ತಪ್ಪು ಉತ್ತರ ನೀಡಿದ್ದಾರೆ ಎಂದು ಗಿರೀಶ್ ಜಿ.ಕೆ ಆಕ್ಷೇಪಿಸಿದರು. ಜಾಗ ಖರೀದಿಯ ಬಗ್ಗೆ ಮಾರುಕಟ್ಟೆ ದರ ಹಾಗೂ ಮಾರ್ಗದರ್ಶಿ ದರ ಗಳಿದ್ದು, ಇದರಲ್ಲಿ ಯಾವುದು ಹೆಚ್ಚೋ ಅದನ್ನು ಕೊಡಬೇಕು ಎಂದು ಹೇಳಿದ ಪುರಸಭಾ ಮುಖ್ಯಾಧಿಕಾರಿಯವರಿಗೆ, ಮಾರುಕಟ್ಟೆ ದರ ಎನ್ನುವುದು ಬರುದೇ ಇಲ್ಲಾ, ಇದರ ಆದೇಶ ಪ್ರತಿ ತೋರಿಸುವಂತೆ ಶಾಸಕ ಹಾಲಾಡಿ ಹೇಳಿದರು. ಯುಜಿಡಿ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ವೆಟ್ ವೆಲ್ ನ್ನು ಸಾರ್ವಜನಿಕ ಜನ ವಸತಿ ಪ್ರದೇಶದಲ್ಲಿ ನಿರ್ಮಾಣ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತದೆ ಎಂದು ನಾವು ಈಗಾಗಲೇ ಆಕ್ಷೇಪ ಸಲ್ಲಿಸಿದ್ದೇವೆ ಎಂದ ಕೆ.ಜಿ.ನಿತ್ಯಾನಂದ ಅವರು, ಜನ ವಸತಿ ಪ್ರದೇಶದಲ್ಲಿ ಇದರ ನಿರ್ಮಾಣ ಮಾಡದಂತೆ ಮನವಿ ಮಾಡಿಕೊಂಡರು.
ಪುರಸಭೆಗೆ ತೆರಿಗೆ ಕಟ್ಟುವ ಸಾಮಾನ್ಯ ಜನರ ದುಡ್ಡು ಪೋಲಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶ್ರೀಧರ ಶೇರುಗಾರ, ಭೂಮಿ ಅವ್ಯವಹಾರದ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು. ನಾಮ ನಿರ್ದೇಶಿತ ಸದಸ್ಯೆ ಪುಪ್ಟಾ ಶೇಟ್, ಹಾಳಾದ ಬಲ್ಪು, ಕಂಪ್ಯೂಟರ್ ಏನಾಗಿದೆ. ಅದನ್ನ ಏಲಂ ಮಾಡಲಾಗಿದೆಯಾ ? ಅವರ ವಿವರ ನೀಡಿ ಎಂದು ಕೇಳಿದಾಗ, ನಾಮ ನಿರ್ದೇಶಿತ ಸದಸ್ಯರಿಗೆ ಸಭೆಯಲ್ಲಿ ಮಾತನಾಡುವುದಕ್ಕೆ ಅವಕಾಶವಿದೆಯಾ ? ಎಂದು ಚಂದ್ರಶೇಖರ ಖಾರ್ವಿ ಪ್ರಶ್ನಿಸಿದ್ದು, ನಾಮ ನಿರ್ದೇಶಿತ ಸದಸ್ಯರನ್ನು ಕೆರಳಿಸಿತು. ಈ ವೇಳೆ ಮಧ್ಯ ಪ್ರವೇಶಿಸಿದ ಹಿರಿಯ ಸದಸ್ಯ ಕೆ.ಮೋಹನದಾಸ ಶೆಣೈ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕು ಹೊರತು ಪಡಿಸಿ, ಉಳಿದಂತೆ ಸಭೆಯ ಕಲಾಪಗಳಲ್ಲಿ ಪಾಲ್ಗೊಳ್ಳುವ ಅಧಿಕಾರವಿದೆ ಎಂದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ನಾಮನಿರ್ದೇಶಕ ಸದಸ್ಯರ ಹಕ್ಕುಗಳ ಬಗ್ಗೆ ನಿರೂಪ ಓದಿ ಹೇಳಿದರು.
ರಿಂಗ್ ರಸ್ತೆಗೆ ಅನುದಾನ..
ಕುಂದಾಪುರ ರಿಂಗ್ ರಸ್ತೆ ಅಭಿವೃದ್ಧಿಗೆ 25 ಕೋಟಿ ಮಂಜೂರಾಗಿದ್ದು, ಇದು ಸರ್ವ ಋತು ರಸ್ತೆಯಾಗಿ ಅಭಿವೃದ್ಧಿ ಹೊಂದಲಿದೆ ಎಂದ ಶಾಸಕರ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರೇ, ವಿರೋಧ ನಾಯಕ ಚಂದ್ರಶೇಖರ ಖಾರ್ವಿ ವಿಧಾನ ಸಭೆಯಲ್ಲಿ ಚುಕ್ಕಿ ಪ್ರಶ್ನೆಯಲ್ಲಿ ಯಾವುದೇ ಅನುದಾನ ಇಲ್ಲ ಎಂದು ಹೇಳಿದ್ದಾರಲ್ಲಾ ಎಂದಾಗ, ಶಾಸಕ ಹಾಲಾಡಿಯವರು, ಸರ್ಕಾರಿ ಅನುದಾನ ಮಂಜೂರಾಗಿರುವ ಆದೇಶ ಪ್ರತಿಯನ್ನು ತೋರಿಸಿದರು. ಕೋಡಿ ಸರ್ವ ಋತು ರಸ್ತೆಗೆ 5 ಕೋಟಿ, ಚರ್ಚ್ ರಸ್ತೆ, ಪೆರ್ರಿ ರಸ್ತೆ, ಖಾರ್ವಿಕೇರಿ ರಸ್ತೆ ಯನ್ನೊಳಗೊಂಡ ಸರ್ವ ಋತು ರಸ್ತೆಗೆ ಅನುದಾನ ಮಂಜೂರಾಗಿದೆ. ಶಾಸಕನಾಗಿ ಇದೀಷ್ಟು ನನ್ನಿಂದ ಸಾಧ್ಯವಾಗಿದೆ, ಸದಸ್ಯರ ನಿಮ್ಮ ಎಲ್ಲಾ ಬೇಡಿಕೆ ಈಡೇರಿಸಲು ನಾನು ಸಿಎಂ ಆದ ಮೇಲೆ ನೋಡುವಾ ಎಂದು ಶಾಸಕರು ಹಾಸ್ಯ ಚಟಾಕಿ ಹಾರಿಸಿದರು.
ಪುರಸಭಾ ವ್ಯಾಪ್ತಿಯ ಗೂಡಂಗಡಿ ವಿಚಾರದ ಕುರಿತಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೇ ಒಂದಷ್ಟು ಹೊತ್ತು ಕಾವೇರಿದ ಚರ್ಚೆಗಳು ನಡೆಯಿತು.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.
Comments are closed.