ಕುಂದಾಪುರ: ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಆಜ್ರಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಡ್ಲಾಡಿ ಗ್ರಾಮದ ಕಂಡುಮಕ್ಕಿ ಎಂಬಲ್ಲಿ 55 ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು ಮತ್ತು ಹರಲಕಟ್ಟು ಎಂಬಲ್ಲಿ 55 ಲಕ್ಷ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ರಚನೆಗೆ ಅನುದಾನ ಬಿಡುಗಡೆಯಾಗಿದ್ದು ಇದರ ಗುದ್ದಲಿ ಪೂಜೆ ಸೋಮವಾರ ನಡೆಯಿತು.
ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಬೈಂದೂರು ಕ್ಷೇತ್ರಕ್ಕೆ ಈಗಾಗಾಲೇ 2 ಸಾವಿರ ಕೋಟಿ ಅನುದಾನ ಮಂಜೂರಾಗಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ವರ್ಷಗಳ ಬೇಡಿಕೆಯಾಗಿರುವ ರಸ್ತೆ ಅಭಿವೃದ್ಧಿ ಹಾಗೂ ಸೇತುವೆಗಳ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಚುನಾವಣೆ ಪೂರ್ವದಲ್ಲಿ ಆಶಾಸ್ವನೆ ನೀಡಿದಂತೆ ಮನೆಮನೆಗೂ ನೀರು ಪೂರೈಸಲು ಕ್ಷೇತ್ರಕ್ಕೆ 594 ಕೋಟಿ ಮಂಜೂರಾಗಿದೆ. ಬೆಳಕು ಕಾರ್ಯಕ್ರಮದಡಿ ಮನೆಮನೆಗೂ ವಿದ್ಯುತ್ ಪೂರೈಸಲು ಕ್ರಮವಹಿಸಲಾಗಿದೆ. 94 ಸಿ ಹಾಗೂ ಅಕ್ರಮ-ಸಕ್ರಮ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗಿದೆ. ಸಿದ್ದಾಪುರ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಹಲವು ವರ್ಷಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ಈಗಾಗಾಲೇ ಆಜ್ರಿ ಗ್ರಾಮಪಂಚಾಯತ್ ವ್ಯಾಪ್ತಿಗೆ 45 ಕೋಟಿ ಅನುದಾನ ನೀಡಲಾಗಿದೆ ಎಂದರು.
ಈ ಭಾಗದ ಒಂದಷ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕರ ಗಮನ ಸೆಳೆಯಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಶಾಸಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆಜ್ರಿ ಗ್ರಾ.ಪಂ ಅಧ್ಯಕ್ಷ ಅಶೋಕ್ ಕುಲಾಲ್, ಸದಸ್ಯರಾದ ಮಲ್ಲಿಕಾ, ಚಂದ್ರಾವತಿ, ಮಾಜಿ ಜಿ.ಪಂ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಸ್ಥಳೀಯ ಪ್ರಮುಖರಾದ ಕೊಡ್ಲಾಡಿ ಸುಭಾಶ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ಕೊಡ್ಲಾಡಿ, ರಘುರಾಮ ಶೆಟ್ಟಿ ಇದ್ದರು.
ಬಿಜೆಪಿ ಸಿದ್ದಾಪುರ ಮಹಾಶಕ್ತಿಕೇಂದ್ರದ ಅಧ್ಯಕ್ಷ, ಆಜ್ರಿ ಗ್ರಾಮಪಂಚಾಯತ್ ಸದಸ್ಯ ಕೊಡ್ಲಾಡಿ ಪ್ರವೀಣ್ ಕುಮಾರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.
Comments are closed.