(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಶೈಕ್ಷಣಿಕ, ಸಾಮಾಜಿಕ ಹಾಗೂ ಸೇವಾ ಸಂಸ್ಥೆಯಾಗಿರುವ ಬೈಂದೂರು ತಾಲೂಕಿನ ಉಪ್ಪುಂದದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನೂತನ ಕಛೇರಿ ಹಾಗೂ ಜಿ.ಬಿ.ಪಿ ಜನಸೇವಾ ಕೇಂದ್ರದ ಕಚೇರಿಯನ್ನು ಬಿಜೂರು ಕೋಟಿ ಚೆನ್ನಯ್ಯ ಗರಡಿ ಬಳಿಯಲ್ಲಿ ಶನಿವಾರ ಗೌರಿಗದ್ದೆಯ ಅವಧೂತರಾದ ಶ್ರೀ ವಿನಯ್ ಗುರೂಜಿ ಉದ್ಘಾಟಿಸಿದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಕಳೆದ ಕೆಲವು ವರ್ಷಗಳಿಂದ ಬೇಸಿಗೆಯಲ್ಲಿ ಸಾವಿರಾರು ಮನೆಗಳಿಗೆ ಕುಡಿಯುವ ನೀರು, ಸೂರಿಲ್ಲದವರಿಗೆ ಏಳು ಮನೆಗಳ ನಿರ್ಮಾಣ, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುತ್ತಿದ್ದು ಕೊರೋನಾ ಸಂದರ್ಭ ಸಾವಿರಾರು ಆಹಾರ ಸಾಮಾಗ್ರಿ ಕಿಟ್, ಆರೋಗ್ಯ ಹಾಗೂ ಆಶಾ ಕಾರ್ಯಕರ್ತರಿಗೆ ಕಿಟ್ ಹಾಗೂ ಸಹಾಯಧನ ನೀಡುವ ಮೂಲಕ ಮಾದರಿ ಟ್ರಸ್ಟ್ ಆಗಿ ಗುರುತಿಸಿಕೊಂಡಿದೆ. ನೂತನ ಕಚೇರಿ ಉದ್ಘಾಟನೆಗೆ ಆಗಮಿಸಿದ ವಿನಯ್ ಗುರೂಜಿ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಗೋವಿಂದ್ ಬಾಬು ಪೂಜಾರಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದು ಕೋಟಿಚೆನ್ನಯ್ಯರಂತೆ ನೊಂದವರು ಹಾಗೂ ಶೋಷಿತರ ಪರವಾಗಿ ಕೆಲಸ ಮಾಡಿ ನ್ಯಾಯ ಕೊಡಿಸಲು ಕರೆ ನೀಡಿದರು. ಇದೇ ವೇಳೆ ಗೋವಿಂದ ಬಾಬು ಪೂಜಾರಿಯವರ ಮಾತೃಶ್ರೀಯವರ ಪಾದ ಪೂಜೆ ಮಾಡುವ ಮೂಲಕ ಗುರೂಜಿ ಗಮನಸೆಳೆದರು.
ಈ ಸಂದರ್ಭ ಡಾ. ಗೋವಿಂದ ಬಾಬು ಪೂಜಾರಿ, ಟ್ರಸ್ಟಿ ಮಾಲತಿ ಗೋವಿಂದ ಪೂಜಾರಿ, ಗೋವಿಂದ ಪೂಜಾರಿಯವರ ತಂದೆ ಬಾಬು ಪೂಜಾರಿ, ತಾಯಿ ಮಂಜಮ್ಮ ಹಾಗೂ ಕುಟುಂಬಿಕರು ಇದ್ದರು.
Comments are closed.