(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾದಯಾತ್ರೆಯು ನೇರಳಕಟ್ಟೆಯಿಂದ ತಲ್ಲೂರುವರೆಗೆ ಆ.10 ಬುಧವಾರ ನಡೆಯಿತು.
ಪಾದಯಾತ್ರೆ ಬಳಿಕ ತಲ್ಲೂರಿನ ಮೂರ್ತೇದಾರರ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸ್ವಾತಂತ್ರ್ಯದ 75ನೇ ಅಮೃತಮಹೋತ್ಸವದ ವೇಳೆ ದೇಶದ ಪ್ರತಿಯೊಬ್ಬ ಪ್ರಜೆಕೂಡ ಇತಿಹಾಸವನ್ನು ನೆನಪಿಸಿಕೊಳ್ಳುವ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ಸ್ಮರಣೆ ಕೂಡ ಮಾಡಬೇಕಿದೆ. ನೇರವಾಗಿ ಜನರನ್ನು ತಲುಪಲು ಪಾದಯಾತ್ರೆಯಿಂದ ಸಾಧ್ಯ ಎಂಬುದನ್ನು ಮಹಾತ್ಮಗಂಧೀಜಿಯವರು ತೋರಿಸಿಕೊಟ್ಟಿದ್ದು ಅವರ ತತ್ವದಲ್ಲಿ ಶಾಂತಿ, ಸಹಬಾಳ್ವೆ, ಸೌಹಾರ್ಧಕ್ಕಾಗಿ ಈ ಪಾದಯಾತ್ರೆ ಮಾಡುತ್ತಿದ್ದು ವಿವಿಧತೆಯಲ್ಲಿ ಏಕತೆಯ ನಡುವೆ ಎಲ್ಲರೂ ಸಮಾನರು ಎಂಬುದನ್ನು ಮನಗಾಣಬೇಕು.
ದ್ವೇಷದ ಮನೋಭಾವನೆ ಬಿಟ್ಟು ಪ್ರೀತಿಯ ಮನೋಭಾವನೆಯೊಂದಿಗೆ ಸಮಾಜದೊಳಗಿನ ಕಂದಕ ಸರಿಪಡಿಸುವ ಕಾರ್ಯವಾಗಬೇಕು ಎಂದರು.
ದೇಶದಲ್ಲಿ ವಿವಿಧ ಧರ್ಮ, ಜಾತಿ, ಭಾಷೆಯಿದ್ದರೂ ಕೂಡ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದ ಆಶಯದಂತೆ ನಡುವಿನ ಗೋಡೆ ಒಡೆದು ಸಾಮಾಜಿಕ ನ್ಯಾಯದ ಕಡೆಗೆ ಮುಖಮಾಡಬೇಕು.ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕ್ರಾಂತಿಕಾರಿ ಹೆಜ್ಜೆಯಿಟ್ಟಿದ್ದು ಬದುಕು ಕಟ್ಟಿಕೊಡುವ ಕಾರ್ಯಕ್ರಮ ರೂಪಿಸಿದೆ. ಆದರೆ ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಮುಂದಿರಿಸಿಕೊಂಡು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಕಳೆದ ಚುನಾವಣೆ ವೇಳೆ ಪರೇಶ್ ಮೇಸ್ತಾ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಂಡಿದ್ದು ಕಾಂಗ್ರೆಸ್ ಸರಕಾರ ಸಿಬಿಐ ತನಿಖೆಗೆ ವಹಿಸಿದ್ದರೂ ಕೂಡ ಈವರೆಗೆ ಫಲಿತಾಂಶ ಸಿಗಲಿಲ್ಲ.
ನಾವು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಗಾಂಧೀಜಿಯವರ ಪೀಳಿಗೆ ಕಾಂಗ್ರೆಸ್ಸಿನದ್ದು. ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದ ಹಿನ್ನೆಲೆಯವರು, ಮಹಾತ್ಮ ಗಾಂಧಿಯವರನ್ನು ಗುಂಡಿಟ್ಟು ಕೊಂದ ಗೋಡ್ಸೆ ತತ್ವ ಮೆಚ್ಚುವ ಪಕ್ಷದವರು ಸ್ವಾತಂತ್ರ್ಯೋತ್ಸವದ ಕುರಿತಾಗಿ ಹಮ್ಮಿಕೊಂಡ ಹರ್ ಘರ್ ತಿರಂಗ ಎಂದು ಕರೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲೊಂದು ರಸ್ತೆಗೆ ನಾತುರಾಮ್ ಗೋಡ್ಸೆ ಹೆಸರಿಟ್ಟಿದ್ದು ನಾವು ಇದನ್ನು ಒಪ್ಪಲು ಸಾಧ್ಯವಿಲ್ಲ. ಕಾಂಗ್ರೆಸ್ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ ಎಂದರು.
ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ ವಂಡ್ಸೆ ಹಾಗೂ ಬೈಂದೂರಿನ ಎರಡು ಬ್ಲಾಕ್ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದು ಪಕ್ಷ ಸಂಘಟನೆಗೆ ಹೆಚ್ಚು ಬಲ ನೀಡಿದಂತಾಗಿದೆ. ಎಲ್ಲರೂ ಒಂದುಗೂಡಿ ಸಾಮೂಹಿಕ ನಾಯಕತ್ವದ ಪರಿಕಲ್ಪನೆಯಲ್ಲಿ ಮುಂದೆ ಸಾಗಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಶ್ರಮಿಸೋಣ ಎಂದು ಕರೆನೀಡಿದರು.
ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಮಾಜಿ ಜಿ.ಪಂ ಅಧ್ಯಕ್ಷ ರಾಜು ಪೂಜಾರಿ, ಜಿಲ್ಲಾ ಎಸ್ಸಿ ಘಟಕದ ಜಯರಾಮ ನಾಯ್ಕ್ ಮುಖಂಡರುಗಳಾದ ಸಂಪಿಗೇಡಿ ಸಂಜೀವ ಶೆಟ್ಟಿ, ವಾಸುದೇವ ಯಡಿಯಾಳ, ರಘುರಾಮ ಶೆಟ್ಟಿ, ದೇವಾನಂದ ಶೆಟ್ಟಿ, ನಾಗಪ್ಪ ಕೊಠಾರಿ, ಆನಂದ ಬಿಲ್ಲವ, ಮಾಜಿ ಜಿ.ಪಂ ಸದಸ್ಯೆ ಜ್ಯೋತಿ ಕಾವ್ರಾಡಿ, ಮಾಜಿ ತಾಪಂ ಸದಸ್ಯ ಸತೀಶ್ ಪೂಜಾರಿ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಉದಯ್ ಪೂಜಾರಿ ಚಿತ್ತೂರು, ಉದಯ್ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಗುಲ್ವಾಡಿ ಗ್ರಾ.ಪಂ ಅಧ್ಯಕ್ಷ ಸುಧೇಶ್ ಕುಮಾರ್ ಶೆಟ್ಟಿ, ಗುಲ್ವಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಕರ್ಕಿ, ಹಟ್ಟಿಯಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಶೆಟ್ಟಿ, ಕರ್ಕುಂಜೆ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ ಮಂಜ, ವಂಡ್ಸೆ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ, ಪ್ರಧಾನಕಾರ್ಯದರ್ಶಿಗಳಾದ ಶ್ರವಣ್ ಶೆಟ್ಟಿ ಸಂಪಿಗೇಡಿ, ಸದಾಶಿವ ಶೆಟ್ಟಿ ಶಂಕರನಾರಾಯಣ, ಹಿಂದುಳಿದ ಘಟಕದ ಉಮೇಶ್ ಕೊಠಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ, ಅಲ್ಪಸಂಖ್ಯಾತ ಘಟಕದ ದಸ್ತಗಿರಿ ಸಾಹೇಬ್, ಎಸ್ಸಿ ಸೆಲ್ ಅರುಣ್ ಕುಮಾರ್, ಆರ್.ಜಿ.ಪಿ.ಆರ್ ಘಟಕದ ಮಂಜುನಾಥ್ ಕುಲಾಲ್, ಎನ್.ಎಸ್.ಯು.ಐ ಅಧ್ಯಕ್ಷ ಮಹೇಂದ್ರ ಕುಲಾಲ್, ಸೋಶಿಯಲ್ ಮೀಡಿಯಾ ಘಟಕದ ಗಣೇಶ್ ಪ್ರಸಾದ ಶೆಟ್ಟಿ ಇದ್ದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಸ್ವಾಗತಿಸಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ವಂದಿಸಿದರು.
ಬೃಹತ್ ಪಾದಯಾತ್ರೆ
ನೇರಳಕಟ್ಟೆ-ಕರ್ಕುಂಜೆ ಮೂಲಕ ಮಾವಿನಕಟ್ಟೆ, ಕರ್ಕಿ, ಹಟ್ಟಿಯಂಗಡಿ ಮೂಲಕ ತಲ್ಲೂರಿನತ್ತ ಪಾದಯಾತ್ರೆ ಸಾಗಿಬಂದಿದ್ದು ನಿರೀಕ್ಷೆಗೆ ಮೀರಿ ಕಾರ್ಯಕರ್ತರು ಪಾಲ್ಘೊಂಡಿದ್ದರು. ಕಾಲುನೋವಿನಲ್ಲೂ ಕೂಡ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ಕಾರ್ಯಕರ್ತರು ಗೋಪಾಲ ಪೂಜಾರಿಗೆ ಜೈಕಾರ ಹಾಕಿ ಹುರಿದುಂಬಿಸಿದರು. ತಲ್ಲೂರು ಪೇಟೆಯಲ್ಲಿ ಪಾದಯಾತ್ರೆ ಸಮಾಪನಗೊಂಡ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಜಿಲ್ಲೆಯ 10 ಬ್ಲಾಕ್ ಗಳಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ನಡೆಯಿತು. 10 ಬ್ಲಾಕ್ ಗೆ ಹೋಲಿಸಿದರೆ ವಂಡ್ಸೆ ಬ್ಲಾಕ್ ವ್ಯಾಪ್ತಿಯಲ್ಲಿ ನಡೆದ ಪಾದಯಾತ್ರೆಯಲ್ಲಿ ಬಹಳಷ್ಟು ಜನರು ಪಾಲ್ಘೊಂಡಿದ್ದರು.
Comments are closed.