ಮಂಗಳೂರು: ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕುಡ್ಲದ ಹಿರಿಮೆ ದಿವಿತಾ ರೈ ಅವರಿಗೆ ಬಂಟರ ಮಾತೃಸಂಘ ಹಾಗೂ ಮಂಗಳೂರು ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ವಸತಿ ನಿಲಯದ ಅಮೃತೋತ್ಸವ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಸೆಪ್ಟಂಬರ್ 6ರಂದು ಸಂಜೆ ನಾಲ್ಕು ಗಂಟೆಗೆ ಮಂಗಳೂರಿನ ಗೀತಾ ಶೆಟ್ಟಿ ಮೆಮೊರಿಯಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೂ ಮುನ್ನ ಜ್ಯೋತಿ ವೃತ್ತದಿಂದ ಸಭಾಂಗಣದವರೆಗೆ ಮೆರವಣಿಗೆ ಮೂಲಕ ತುಳುನಾಡ ಸಾಂಪ್ರದಾಯಿಕ ಶೈಲಿಯಲ್ಲಿ ದಿವಿತಾ ರೈ ಅವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಗುವುದು ಎಂದರು.
ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ದಿವಿತಾ ರೈ ಅವರಿಗೆ ತವರೂರಿನ ಸನ್ಮಾನ ಅತ್ಯಂತ ಮಹತ್ತ್ವವಾದುದು. ಹಾಗಾಗಿ ತುಳುನಾಡ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಪಸರಿಸುವ ಅಮೋಘ ಕಾರ್ಯಕ್ರಮಕ್ಕೆ ಇದು ಸಾಕ್ಷಿಯಾಗಲಿದೆ. ಬಂಟರ ಸಂಘ ಅನೇಕ ವರ್ಷಗಳಿಂದ ಹೆಣ್ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಉತ್ತೇಜನ ನೀಡುತ್ತಾ ಬಂದಿದೆ. ಇದಕ್ಕೆ ಹೆಣ್ಮಕ್ಕಳಿಗಾಗಿಯೇ ವಿದ್ಯಾರ್ಥಿನಿ ನಿಲಯಗಳನ್ನು ಸ್ಥಾಪಿಸಿ ಅವರಿಗೆ ಸೂಕ್ತ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಕಾಕತಾಳೀಯವೆನ್ನುವಂತೆ ಈ ಬಾರಿಯ ಸ್ಪರ್ಧೆಯಲ್ಲಿ ದಿವಿತಾ, ಜಾಗತಿಕ ಸವಾಲುಗಳಲ್ಲೊಂದಾದ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಮಾತನಾಡಲಿರುವುದು ಬಂಟರಿಗೆ ಹೆಮ್ಮೆ ತರುವಂತಹ ವಿಷಯ ಎಂದು ಅವರು ಹೇಳಿದರು.
ಬಂಟರ ಸಂಘ ಕೇವಲ ಬಂಟ ಸಮುದಾಯದ ಪ್ರತಿಭೆಗಳನ್ನು ಮಾತ್ರವಲ್ಲದೆ ತುಳುನಾಡಿನ ಎಲ್ಲಾ ಸಮುದಾಯದ ಪ್ರತಿಭೆಗಳನ್ನು ಗುರುತಿಸಿ, ಗೌರವಿಸುವ ಕಾರ್ಯವನ್ನು ಸದಾ ನಡೆಸುತ್ತಾ ಬಂದಿದೆ. ಮುಂದೆಯೂ ಈ ಪರಂಪರೆಯನ್ನು ಮುಂದುವರಿಸಲಾಗುವುದು ಎಂದರು.
*ದಿವಿತಾ ರೈ ಪರಿಚಯ:* ಮೂಲತ: ಮಂಗಳೂರಿನ ನಿವಾಸಿಗಳಾದ, ಸಧ್ಯ ಮುಂಬಯಿಯಲ್ಲಿ ನೆಲೆಸಿರುವ ದಿಲೀಪ್ ರೈ ಹಾಗೂ ಶ್ರೀಮತಿ ಪವಿತ್ರಾ ರೈ ದಂಪತಿಗಳ ಪುತ್ರಿ. ಈಕೆ ಜನಿಸಿದ್ದು ಮಂಗಳೂರಿನಲ್ಲಿ; ಬೆಳೆದಿದ್ದು ಮುಂಬಯಿಯಲ್ಲಿ. ವಾಸ್ತುಶಿಲ್ಪಿ ಹಾಗೂ ಮಾಡೆಲ್ ಆಗಿರುವ ಇವರು ಮುಂಬಯಿಯ ಸರ್ ಜೆ.ಜೆ. ಕಾಲೇಜ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಪದವೀಧರೆ. ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಚಿತ್ರಕಲೆ, ಸಂಗೀತ ಕೇಳುವುದು ಮತ್ತು ಓದುವುದು ಇವರ ಹವ್ಯಾಸಗಳು.
ಇವರ ಅಣ್ಣ ದೈವಿಕ್ ರೈ ಕೂಡಾ ಪ್ರತಿಭಾವಂತ. ಭಾರತದ ಒಳಾಂಗಣ ಕ್ರಿಕೆಟ್ ತಂಡದ ಸದಸ್ಯರಾಗಿರುವ ಇವರು 2017ರ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತದ ತಂಡದಲ್ಲಿದ್ದರು.
ಸುದ್ದಿಗೋಷ್ಟಿಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತೋತ್ಸವ ಸಮಿತಿ ಅಧ್ಯಕ್ಷರಾಗಿರುವ ಶ್ರೀಮತಿ ವೀಣಾ ಟಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಯನಾ ಶೆಟ್ಟಿ, ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಸಂಚಾಲಕಿ ಶ್ರೀಮತಿ ಶಾಲಿನಿ ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ಸವಿತಾ ಚೌಟ ಉಪಸ್ಥಿತರಿದ್ದರು.
Comments are closed.