ಕರಾವಳಿ

ಮರೆಯಲಾಗದ ʻಮಾರ್ನೆಮಿʼ! – ನಾಳೆಯಿಂದ ನವರಾತ್ರಿ ಸಂಭ್ರಮ -ವೈಭವದ ದಸರಾ ಹಬ್ಬಕ್ಕಾಗಿ ಕ್ಷಣಗಣನೆ

Pinterest LinkedIn Tumblr

ಮಂಗಳೂರು:ಇಡೀ ಮಂಗಳೂರಿಗೆ ಮಂಗಳೂರೇ ಸಂಭ್ರಮಿಸುವ ದಸರಾ ಹಬ್ಬವನ್ನು (ತುಳುವರ ಮಾರ್ನೆಮಿ ಪರ್ಬ)  ಶ್ರದ್ಧಾ-ಭಕ್ತಿ ಹಾಗೂ ವೈಭವದಿಂದ ಆಚರಿಸಲು ಭಕ್ತಾದಿಗಳ ಕ್ಷಣಗಣನೆ ಆರಂಭಗೊಂಡಿದೆ.  10 ದಿನಗಳ ಪರ್ಯಂತ ನಡೆಯುವ ದಸರಾ ಹಬ್ಬಕ್ಕಾಗಿ ಇಡೀ ನಗರ ಸಜ್ಜುಗೊಂಡಿದೆ.   ಅವಿಭಜಿತ ದ.ಕ.ಜಿಲ್ಲೆಯ ಬಹುತೇಕ ಮಂದಿ ಶಕ್ತಿಯ ಆರಾಧಕರು.  ಹಾಗಾಗಿಯೇ ಈ ಪ್ರದೇಶದಲ್ಲಿ ನವದುರ್ಗೆಯರ ಆರಾಧನೆಯ ನವರಾತ್ರಿ ಹಬ್ಬಕ್ಕೆ ಇತರ ಎಲ್ಲ ಹಬ್ಬಗಳಿಗಿಂತ  ವಿಶೇಷ ಪ್ರಾಧಾನ್ಯತೆ ಇದೆ.

ಮಂಗಳೂರು ನಗರಕ್ಕೆ ಸಂಬಂಧಿಸಿದಂತೆ, ಮಂಗಳಾದೇವಿ ದೇವಸ್ಥಾನ, ರಥಬೀದಿಯ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಬೋಳಾರದ ಶ್ರೀ ಮಾರಿಗುಡಿ ಹಾಗೂ ಉರ್ವದ ಮಾರಿಯಮ್ಮ ದೇವಸ್ಥಾನಗಳಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಂಗಳೂರು ಹೊರತುಪಡಿಸಿ ವಿಶೇಷವಾಗಿ ಕೊಲ್ಲೂರು, ಕಟೀಲು, ಪೊಳಲಿ, ಬಪ್ಪನಾಡು, ಸಸಿಹಿತ್ಲು, ಚಿತ್ರಾಪುರ ಮತ್ತಿತರ ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ಸಾವಿರಾರು ಭಕ್ತರ ದಂಡೇ ನೆರೆದಿರುತ್ತದೆ. ಸಾರ್ವಜನಿಕವಾಗಿಯೂ ಜಿಲ್ಲೆಯ ಅಲ್ಲಲ್ಲಿ ಶ್ರೀ ಶಾರಾದೋತ್ಸವ ನಡೆಯುತ್ತಿದ್ದು, ವಿವಿಧ ಸಂಘ-ಸಂಸ್ಥೆಗಳು ತಯಾರಿಯ ನಿಟ್ಟಿನಲ್ಲಿ ಸಕ್ರಿಯಗೊಂಡಿವೆ.

ʻಮಾರ್ನೆಮಿʼ ಎಂಬ ಶಬ್ದ ಕೇಳಿದಾಗಲೆಲ್ಲ ನನ್ನ ಬಾಲ್ಯ ಕಾಲದ ನೆನಪು ಮರುಕಳಿಸುತ್ತಿದೆ!   ದಸರಾ ಹಬ್ಬದ 10 ದಿನಗಳ ಕಾಲ ವೈವಿಧ್ಯಮಯ ವೇಷಗಳದ್ದೇ ಪಾರುಪತ್ಯವಿದ್ದ ಕಾಲವದು.  ನಗರವಿಡೀ ಬ್ಯಾಂಡು-ವಾದ್ಯಗಳದ್ದೇ ಸದ್ದು-ಗದ್ದಲ! ಪೇಪರ್‌ ಮಾರುವವನ ವೇಷದಿಂದ ತೊಡಗಿ, ಹುಲಿ ವೇಷದವರೆಗೆ ವಿವಿಧ ವೇಷಗಳು ಮನೆ-ಮನೆಗೆ ಬರುತ್ತಿದ್ದ ನೆನಪು ಮನಪಟಲದಲ್ಲಿ ಅಚ್ದಳಿಯದೆ ನೆಲೆ ನಿಂತಿದೆ! ನಾವು ಸಮಾನ ಮನಸ್ಕ ಹುಡುಗರು ವೇಷಗಳ ಹಿಂದೆ ಮನೆ ಮನೆಗೆ ಅಡ್ಡಾಡಿದ್ದು, ಹಿಂದೆ ಬರುವಾಗ ಮನೆ ದಾರಿ ತಿಳಿಯದೆ ಪರದಾಡಿದ್ದು ಈಗ ಎಲ್ಲ ನೆನಪು!  ನಿರ್ದಿಷ್ಟ ವರ್ಷದ ನವರಾತ್ರಿಯಲ್ಲಿ ಯಾರು ಹೆಚ್ದು ಸಂಖೈಯ ವೇಷ ನೋಡುತ್ತಾರೆಂಬ ಬಗ್ಗೆ ನಮ್ಮೊಳಗೆ ಬಿಗು ಪೈಪೋಟಿಯೂ ಚಾಲ್ತಿಯಲ್ಲಿತ್ತು!

ಬಹುತೇಕ ಮಂದಿ ಆಸಕ್ತಿಯಿಂದಲೋ, ದೇವರಿಗೆ ಹರಕೆ ಹೇಳಿಯೋ ವೇಷ ಧರಿಸಿದರೆ, ಇನ್ನು ಕೆಲವರು ಕುಡಿತದ ಚಟಕ್ಕಾಗಿ ಹಣ ಸಂಗ್ರಹದ ಉದ್ದೇಶದಿಂದಲೇ ವೇಷ ತೊಟ್ಟದ್ದೂ ಉಂಟು!  ಬರಬರುತ್ತಾ ದೇವರ ವೇಷ ಧರಿಸಿ ʻತೂರಾಡುವʼ ಮಂದಿಯಿಂದಾಗಿ ಇಂತಹ ವೇಷಗಳನ್ನೇ ನಿರ್ಬಂಧಿಸುವ ಅನಿವಾರ್ಯತೆ ಬಂದೊದಗಿತು. ಜಾತಿ ನಿಂದನೆಯ ಆರೋಪದಿಂದಾಗಿಯೂ ಹಲವು ವೇಷಗಳು ಕಣ್ಮರೆಯಾದವು. ಪ್ರಸ್ತುತ ಮನೆಮನೆಗೆ ಬರುವ ಬಹುತೇಕ ವೇಷಗಳು ಮರೆಯಾಗಿದ್ದು, ಈಗಿನ ಮಕ್ಕಳಿಗೆ ನಾವು ಈ ಹಿಂದೆ ನೋಡಿ, ನಮ್ಮೆಲ್ಲರ ಮನರಂಜಿಸಿದ್ದ ನೂರಾರು ವೇಷಗಳ ಪರಿಚಯವೇ ಇರಲಿಕ್ಕಿಲ್ಲ!

ಕಳೆದೆರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಸಪ್ಪೆಯಾಗಿದ್ದ  ನಾಗರಪಂಚಮಿ, ಮೊಸರುಕುಡಿಕೆ ಮತ್ತು ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಈ ಬಾರಿ ಅಪಾರ ಜನಸ್ತೋಮ ಬಹಳ ಉತ್ಸಾಹದಿಂದ ಪಾಲ್ಗೊಂಡದ್ದು ಇಲ್ಲಿ ಉಲ್ಲೇಖನೀಯ.   ಹಾಗಾಗಿಯೇ ಮಂಗಳಾದೇವಿ, ವೆಂಕಟರಮಣ ಹಾಗೂ ಕುದ್ರೋಳಿ ದೇಗುಲಗಳಲ್ಲಿ ಈ ಬಾರಿ ದಸರಾ ಹೆಚ್ದಿನ ವಿಜೃಂಭಣೆಯಿಂದ ಜರಗಿಸಲು ಭರ್ಜರಿ ಪೂರ್ವ ತಯಾರಿ ನಡೆಯುತ್ತಿದೆ.  ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠ ಆಯೋಜಿಸುತ್ತಿರುವ ಶಾರದೋತ್ಸವಕ್ಕೆ ಈ ಬಾರಿ ಶತಮಾನೋತ್ಸವದ  ಸಂಭ್ರಮವಾದ್ದರಿಂದ ಇಲ್ಲಿನ ಭಕ್ತರ ಉತ್ಸಾಹ ಇಮ್ಮಡಿಗೊಂಡಿದೆ.

ದಸರಾ ಹಬ್ಬದ ಪ್ರಮುಖ ಆಕರ್ಷಣೆ ಎಂದರೆ ವಿಜಯದಶಮಿಯಂದು ನಡೆಯುವ ಅಪೂರ್ವ ಶೋಭಾಯಾತ್ರೆ.  ಆ ದಿನ ಕುದ್ರೋಳಿ ಹಾಗೂ ಮಂಗಳಾದೇವಿ ದೇವಸ್ಥಾನಗಳಲ್ಲಿ ವೈವಿಧ್ಯಮಯ ಟ್ಯಾಬ್ಲೋಗಳೊಂದಿಗೆ  ಮೆರವಣಿಗೆ ಸಾಗುತ್ತದೆ. ಶೋಭಾಯಾತ್ರೆ ತೆರಳುವ ಹಾದಿಯು ವಿದ್ಯುತ್‌ದ್ದೀಪಗಳಿಂದ ಅಲಂಕೃತಗೊಳ್ಳುತ್ತಿದ್ದು  10 ದಿನಗಳ ಕಾಲ ನೋಡುಗರ ಕಣ್ಮನ ಸೆಳೆಯಲಿದೆ.   ವಿಜಯದಶಮಿಯ ಮರುದಿನ ಏಕಾದಶಿಯಂದು ವೆಂಕಟರಮಣ ದೇವಳದಲ್ಲಿ ಫೂಜಿತಗೊಂಡ ಶಾರದೆಯ ಶೋಭಾಯಾತ್ರೆ ನಡೆಯುತ್ತದೆ.

ಕುದ್ರೋಳಿಯ ದಸರಾ ವೈಭವ ವೀಕ್ಷಿಸಲು ದೇಶದ ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸುವುದು ಮಂಗಳೂರಿಗರಿಗೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.  ಮಣ್ಣಗುಡ್ಡೆಯ ಉತ್ಸಾಹಿ ತರುಣ ವೃಂದವು ನಿರಂತರ 31 ವರ್ಷಗಳಲ್ಲಿ ವಿವಿಧ ಪೌರಾಣಿಕ ದೃಶ್ಯರೂಪಕಗಳ ಮೂಲಕ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೆನಪು ಈ ಸಂಘಟನೆಯ ಪದಾಧಿಕಾರಿಯಾಗಿ ವೈಯಕ್ತಿಕವಾಗಿ ನನಗೆ ಅತೀವ ಹೆಮ್ಮೆ ತರುವ ವಿಚಾರವಾಗಿದೆ. ಈಗಂತೂ ಮಂಗಳೂರಿನ ಹಲವು ಯುವ ಸಂಘಟನೆಗಳು ಆಯೋಜಿಸುತ್ತಿರುವ ಚಿತ್ರ-ವಿಚಿತ್ರ ವೇಷಗಳ  ದೃಶ್ಯರೂಪಕಗಳು ಎಲ್ಲರ ಮನಸೂರೆಗೊಳ್ಳುತ್ತಿವೆ. ಲಕ್ಷಗಟ್ಟಲೆ ರೂ.ವ್ಯಯಿಸಿ ನಿರ್ಮಿಸಿದ ವಿಭಿನ್ನ ಶೈಲಿಯ ಅದ್ದೂರಿ ವಿನ್ಯಾಸದಿಂದಾಗಿ ಇಂತಹ ಟ್ಯಾಬ್ಲೋಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

(ಕಡತ ಚಿತ್ರಗಳು)

ಇತ್ತೀಚಿನ ವರ್ಷಗಳಲ್ಲಿ ಕೆಲವು ದಿನಪತ್ರಿಕೆಗಳು ನವರಾತ್ರಿಯ ಸಂದರ್ಭದಲ್ಲಿ  ಮಹಿಳೆಯರಿಗಾಗಿಯೇ ವಿಶೇಷ ಪುರವಣಿ ಹೊರಡಿಸುತ್ತಿದ್ದು, ಹೆಚ್ಚಿನ ಮಹಿಳೆಯರು ದಿನಕ್ಕೊಂದು ಬಣ್ಣದ ಉಡುಗೆಯೊಂದಿಗೆ ಪತ್ರಿಕೆಗಳಲ್ಲಿ ಮಿಂಚಲಿರುವುದನ್ನು ಕಾಣಬಹುದಾಗಿದೆ!  ಇದು  ದಸರಾ ಹಬ್ಬಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತದೆ ಎಂದರೆ ಅತಿಶಯೋಕ್ತಿ ಆಗಲಾರದು. ಮಾಂಸಾಹಾರಿಗಳು ದಸರಾ ಹಬ್ಬದ ಸಂದರ್ಭದಲ್ಲಿ ಹೆಚ್ಚೆಚ್ಚು ಶಾಖಾಹಾರಿಗಳಾಗಿ ಬದಲಾಗುತ್ತಿರುವುದೂ ಇತ್ತೀಚೆಗಿನ ಹೊಸ ಬೆಳವಣಿಗೆಯಾಗಿದೆ!   ಒಟ್ಟಿನಲ್ಲಿ ದಸರಾ ಮಂಗಳೂರಿಗರ ಪಾಲಿಗೆ ನಿಜಕ್ಕೂ ಒಂದು ವೈಶಿಷ್ಟ್ಯಪೂರ್ಣ ಹಬ್ಬವಾಗಿ ದಾಖಲಾಗಿದೆ.

  • ಸತೀಶ್‌ ಶೆಟ್ಟಿ ಕೊಡಿಯಾಲ್‌ಬೈಲ್‌

Comments are closed.