ಮಂಗಳೂರು, ಅ. 05 : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಸೆ.26ರಿಂದ ಆರಂಭಗೊಂಡಿದ್ದ ವೈಭವದ ಮಂಗಳೂರು ದಸರಾ-2022 ಶೋಭಾಯಾತ್ರೆ ಇಂದು ( ಅ. 5, ಬುಧವಾರ) ಸಂಜೆ ಕೇಂದ್ರದ ಮಾಜಿ ಸಹಾಯಕ ವಿತ್ತ ಸಚಿವ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ನೇತ್ರತ್ವದಲ್ಲಿ ಆರಂಭಗೊಂಡಿದ್ದು, ಶ್ರೀ ನವದುರ್ಗೆಯರ ಹಾಗೂ ಶ್ರೀ ಶಾರದ ಮಾತೆಯ ವಿಗ್ರಹಗಳು ನಾಳೆ ಮುಂಜಾನೆ ಶ್ರೀ ಕ್ಷೇತ್ರದ ಪುಷ್ಖರಣಿಯಲ್ಲಿ ಸಂಪನ್ನಗೊಳ್ಳಲಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿಯ ಮಂಗಳೂರು ದಸರಾ ಮಹೋತ್ಸವ .26ರಿಂದ ಆರಂಭಗೊಂಡು ಅ.5ರವರೆಗೆ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಜರಗಿತು.
ಭವ್ಯ ಶೋಭಾಯಾತ್ರೆ:
ಅ.5 ರಂದು ಬೆಳಗ್ಗೆ ಗಂಟೆ 10.00ರಿಂದ ವಾಗೀಶ್ವರಿ ದುರ್ಗಾಹೋಮ, 12.30ಕ್ಕೆ ಶಿವಪೂಜೆ, ಸಂಜೆ 4.00ರಿಂದ ಶ್ರೀ ಶಾರದ ಮಾತೆಯ ಶೋಭಾಯಾತ್ರೆ ಆರಂಭಗೊಂಡಿತ್ತು . ಈ ಮೆರವಣಿಗೆಗೆ ರಾಜ್ಯದ ನಾನಾ ಕಡೆಯಿಂದ ಆಗಮಿಸಿ ಕಲಾತಂಡಗಳು, ಹುಲಿವೇಷ ಹಾಗೂ ಇತರ ವೇಷದ ಟ್ಯಾಬ್ಲೋಗಳು, ವೇಷಭೂಷಣಗಳು, ಚೆಂಡೆ ತಂಡಗಳು ಮೆರುಗು ನೀಡಿತು.
ಕೇಂದ್ರದ ಮಾಜಿ ಸಹಾಯಕ ವಿತ್ತ ಸಚಿವ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ನೇತ್ರತ್ವದಲ್ಲಿ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಉಪಾಧ್ಯಕ್ಷೆ ಊರ್ಮಿಳ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. ( ಅಡ್ವಕೇಟ್), ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಬಿ.ಜಿ. ಸುವರ್ಣ, ಟ್ರಸ್ಟಿಗಳಾದ ರವಿಶಂಕರ್ ಮಿಜಾರ್, ಕೆ. ಮಹೇಶ್ಚಂದ್ರ, ಎಂ. ಶೇಖರ್ ಪೂಜಾರಿ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು.
ನಾಳೆ ಗುರುಪೂಜೆ :
ಅ.6ರಂದು ಪ್ರಾತಃಕಾಲ 4.00ರಿಂದ ಪೂಜೆ ಬಲಿ, ಮಂಟಪ ಬಲಿ, ಪ್ರಾತಃಕಾಲ ಮಂಟಪ ಪೂಜೆ ಬಳಿಕ ಶ್ರೀ ಶಾರದ ವಿಸರ್ಜನೆ, ಅವಭೃತ ಸ್ನಾನ. ರಾತ್ರಿ 7.00ರಿಂದ 8.00ರತನಕ ಭಜನಾ ಕಾರ್ಯಕ್ರಮ, 8.00ರಿಂದ ಗುರುಪೂಜೆ ನಡೆಯಲಿದೆ.
ವರದಿ ಹಾಗೂ ಚಿತ್ರ: ಸತೀಶ್ ಕಾಪಿಕಾಡ್
Comments are closed.