ಕರಾವಳಿ

ಮಂಗಳೂರಿನ ಹೆಸರಾಂತ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ವಿಧಿವಶ ; ಗಣ್ಯರಿಂದ ಸಂತಾಪ

Pinterest LinkedIn Tumblr

ಮಂಗಳೂರು, ಮಾ 01 : ‘ಉದಯವಾಣಿ’ ಪತ್ರಿಕೆಯ ಮಂಗಳೂರು ಅವೃತ್ತಿಯಲ್ಲಿ ಹಲವಾರು ವರ್ಷಗಳಿಂದ ನ್ಯೂಸ್ ಬ್ಯೂರೋ ಮುಖ್ಯಸ್ಥರಾಗಿದ್ದು, ಬಳಿಕ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿ, ಕಳೆದ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದ ಖ್ಯಾತ ಪತ್ರಕರ್ತ, ಕಾರ್ಯಕ್ರಮ ನಿರೂಪಕ, ಕತೆಗಾರ ಹಾಗೂ ಕವಿ ಮನೋಹರ ಪ್ರಸಾದ್ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.

ಮೂಲತಃ ಕಾರ್ಕಳ ತಾ| ಕರುವಾಲು ಗ್ರಾಮದವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ “ನವ ಭಾರತ’ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ “ಉದಯವಾಣಿ’ಗೆ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಅಲ್ಲಿಂದ ಮೊದಲ್ಗೊಂಡು ಮುಖ್ಯ ವರದಿಗಾರರಾಗಿ, ಬಳಿಕ ಬ್ಯೂರೋ ಚೀಫ್ ಮತ್ತು ಪ್ರಸ್ತುತ ಸಹಾಯಕ ಸಂಪಾದಕರ ಹುದ್ದೆಯವರೆಗೆ ಸತತ 36 ವರ್ಷಗಳ ಸೇವೆ ಸಲ್ಲಿಸಿ ಕಳೆದ ಎರಡು ವರ್ಷದ ಹಿಂದೆ ನಿವೃತ್ತಿಗೊಂಡಿದ್ದರು.

ಮನೋಹರ್ ಪ್ರಸಾದ್ ಅವರು ಕರ್ನಾಟಕ ರಾಜ್ಯೋ ತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ, ಕೆನರಾ ಬ್ಯಾಂಕ್ ಅಮೃತೋತ್ಸವ ಪುರಸ್ಕಾರ ಮೊದಲಾದ ಹಲವು ಗೌರವ ಗಳಿಗೆ ಭಾಜನರಾಗಿದ್ದರು.

ಗಣ್ಯರಿಂದ ಸಂತಾಪ ;

ಮನೋಹರ್ ಪ್ರಸಾದ್ ಅವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಂಸದ ನಳಿನ್ ಕುಮಾರ್, ಶಾಸಕ ವೇದವ್ಯಾಸ ಕಾಮಾತ್ ಸೇರಿದಂತೆ ಹಲವಾರು ಮಂದಿ ಪ್ರನುಖರು ಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ನಾಲ್ಕು ಗಂಟೆಗೆ ಮಂಗಳೂರು ಪ್ರೆಸ್ ಕ್ಲಬ್‌ ನಲ್ಲಿ ಪಾರ್ಥಿವ ಶರೀರರದ ದರ್ಶನ :

ಮನೋಹರ್ ಪ್ರಸಾದ್ ಅವರ ಪಾರ್ಥಿವ ಶರೀರವು ಮಂಗಳೂರು ಕದ್ರಿಯ ಲೋಬೊ‌ ಲೇನ್‌ನ ಈಶಾ ಲ್ಯಾಂಡ್ ಟ್ರೇಡ್ಸ್ ಫ್ಲ್ಯಾಟ್‌ನಲ್ಲಿದೆ. ಮಧ್ಯಾಹ್ನ ತನಕ ಅಂತಿಮ ದರ್ಶನ ಮಾಡಬಹುದು. ಬಳಿಕ ಧಾರ್ಮಿಕ ವಿಧಿ ವಿಧಾನಗಳು ನಡೆದು, ಸಂಜೆ ನಾಲ್ಕು ಗಂಟೆಗೆ ಮಂಗಳೂರು ಪ್ರೆಸ್ ಕ್ಲಬ್‌ಗೆ ತಂದು, ಶ್ರದ್ಧಾಂಜಲಿ ಸಲ್ಲಿಸಿ, ಬಳಿಕ ಕದ್ರಿ ಸ್ಮಶಾನದಲ್ಲಿ ಅಂತಿಮ‌ ಸಂಸ್ಕಾರ ನಡೆಯಲಿದೆ.

ಮನೋಹರ್ ಪ್ರಸಾದ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಸಂತಾಪ:

ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.‘ನವಭಾರತ’ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ ಅವರು, ಬಳಿಕ ಉದಯವಾಣಿ ಪತ್ರಿಕೆ ಸೇರಿ ಅಲ್ಲಿ ವರದಿಗಾರ, ಮುಖ್ಯ ವರದಿಗಾರ, ಬ್ಯೂರೋ ಚೀಫ್, ಸಹಾಯಕ ಸಂಪಾದಕ ಸೇರಿ ವಿವಿಧ ಹುದ್ದೆಗಳಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ರಾಜ್ಯೋತ್ಸವ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿದ್ದವು ಎಂದು ತಿಳಿಸಿದ್ದಾರೆ.

 

 

 

Comments are closed.