ಕರಾವಳಿ

ಅಗಸ್ಟ್ 24 : ಮಂಗಳೂರಿನಲ್ಲಿ ತುಳುನಾಡ ಜಾನಪದ ಉಚ್ಛಯ ಕಾರ್ಯಕ್ರಮ – ಪೆರ್ಮೆದ ತುಳುವೆ ಪ್ರಶಸ್ತಿ, ಸಾಂಸ್ಕೃತಿಕ ಪ್ರದರ್ಶನ

Pinterest LinkedIn Tumblr

ಮಂಗಳೂರು: “ಅಖಿಲ ಭಾರತ ತುಳು ಒಕ್ಕೂಟ ತುಳು ಭಾಷೆ, ಸಂಸ್ಕೃತಿ ಅಭಿವೃದ್ಧಿ ನೆಲೆಯಲ್ಲಿ ಸ್ಥಾಪಿಸಲ್ಪಟ್ಟಿದ್ದು ದೇಶದಾದ್ಯಂತ ಸುಮಾರು 46 ತುಳು ಸೇವಾ ಸಂಸ್ಥೆಗಳು ಇದರ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿವೆ. ತುಳು ಭಾಷೆಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳು, ಸಮಾರಂಭಗಳು, ಸಮ್ಮೇಳನಗಳು ದೇಶ ವಿದೇಶದಲ್ಲಿ ನಡೆಯುತ್ತಿದೆ. ಬರುವ ಅಗಸ್ಟ್ 24, ಶನಿವಾರದಂದು ತುಳುನಾಡ ಜಾನಪದ ಉಚ್ಛಯ ಕಾರ್ಯಕ್ರಮ ನಡೆಯಲಿದ್ದು ಇದಕ್ಕೆ ತುಳುವರ ಸಹಕಾರ ನಿರೀಕ್ಷಿಸುತ್ತಿದ್ದೇವೆ“ ಎಂದು ಸಂಘಟನೆಯ ಅಧ್ಯಕ್ಷ ಎಸಿ ಭಂಡಾರಿ ತಿಳಿಸಿದರು.

ನಗರದಲ್ಲಿಂದು ಕರೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 8.30ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪುರಭವನದ ವರೆಗೆ ತುಳುವೆರ ದಿಬ್ಬಣ ಮೆರವಣಿಗೆ ನಡೆಯಲಿದೆ. ಇದರಲ್ಲಿ ಸುಮಾರು 8 ಜಾನಪದ ಕಲಾಕೂಟಗಳು ಭಾಗವಹಿಸಲಿವೆ ಎಂದರು.

ಈ ಸಮಾರಂಭವನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಲಯನ್ ದಿವಾಕರ ಶೆಟ್ಟಿ ಸಾಂಗ್ಲಿ, ನಗ್ರಿಗುತ್ತು ರೋಹಿತ್‌ ಶೆಟ್ಟಿ, ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮುಂಬೈ ಉಪಸ್ಥಿತರಿರಲಿದ್ದಾರೆ.

ಇದೇ ಸಂದರ್ಭದಲ್ಲಿ ಕಂಬಳಕೂಟ ಹೆಸರುವಾಸಿಯಾದ ನಂದಳಿಕೆ ಶ್ರೀಕಾಂತ ಭಟ್ ರವರ ದಿಡ್ಡೆರು “ನಂದಳಿಕೆ ಪಾಂಡು”ವಿಗೆ ಸಮ್ಮಾನ ಗೌರವ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಪುರಭವನದಲ್ಲಿ ನಡೆಯಲಿರುವ ನಮ್ಮ ತುಳುನಾಡ ಕಲಾಪಂಥವನ್ನು ಡಾ| ಎ. ಸದಾನಂದ ಶೆಟ್ಟಿ ಇವರು ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಇವರು ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಪ್ರೊ.ಪಿ.ಎಲ್, ಧರ್ಮ, ಬಿ.ರಮಾನಾಥ ರೈ, ರಾಜೇಶ್ ಖನ್ನಾ, ಜಾನಕಿ ಬ್ರಹ್ಮಾವರ್ ಉಪಸ್ಥಿತರಿರಲಿದ್ದಾರೆ.

ವಿವಿಧ ಭಾಷಾ ಅಕಾಡೆಮಿಗಳ ಅಧ್ಯಕ್ಷರುಗಳಾದ ತಾರನಾಥ್ ಗಟ್ಟಿ ಕಾಪಿಕಾಡ್, ತಲ್ಲೂರು ಶಿವರಾಮ್ ಶೆಟ್ಟಿ, ಜೋಕಿಂ ಸ್ವಾನಿ ಅಲ್ವಾರಿಸ್, ಉಮರ್ ಯು. ಹೆಚ್. ಸದಾನಂದ ಮಾವಜಿ, ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಭಾಗವಹಿಸಲಿದ್ದಾರೆ. ನಮ್ಮ ತುಳುನಾಡ ಕಲಾಪಂಥದಲ್ಲಿ ಸುಮಾರು 13 ತುಳು ಸೇವಾ ಸಂಘಟನೆಗಳು ಭಾಗವಹಿಸಲಿದ್ದು, ಪ್ರಥಮ ನಗದು ಬಹುಮಾನ 50,000, ದ್ವಿತೀಯ ರೂ.30,000, ತೃತೀಯ ರೂ. 20,000 ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಗೌರವ ಧನ ರೂ.5,000 ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು“ ಎಂದರು.

ಬಳಿಕ ಮಾತಾಡಿದ ಸಂಘಟನೆಯ ಪ್ರಧಾನ ಸಂಚಾಲಕರಾದ ಕದ್ರಿ ನವನೀತ ಶೆಟ್ಟಿ ಅವರು, ”ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ
ಯವರು ಆಶೀರ್ವಚನ ನೀಡಲಿದ್ದು, ಸಭಾಧ್ಯಕ್ಷರಾಗಿ ಸ್ಪೀಕರ್ ಯು.ಟಿ. ಖಾದರ್, ಅತಿಥಿಗಳಾಗಿ ಶಿವರಾಜ್ ಎಸ್. ತಂಗಡಗಿ, ಸೋಮಣ್ಣ ಬೇವಿನಮರದ ಭಾಗವಹಿಸಲಿದ್ದಾರೆ.

“ಪೆರ್ಮೆದ ತುಳುವೆ” 2024 – ಹಿರಿಯ ನಾಟಕಕಾರ, ನಟ, ನಿರ್ಮಾಪಕ, ನಿರ್ದೇಶಕ, ಸಂಘಟಕ ತೋನ್ಸೆ ವಿಜಯಕುಮಾರ್ ಶೆಟ್ಟಿ ಮುಂಬೈ ಇವರಿಗೆ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರಧಾನವನ್ನು ಡಾ| ಎಂ. ಮೋಹನ್ ಆಳ್ವ ಮೂಡಬಿದಿರೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಶಿಕಿರಣ್ ಶೆಟ್ಟಿ, ಮುಂಬೈ, ಐಕಳ ಹರೀಶ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಧರ್ಮಪಾಲ ಯು. ದೇವಾಡಿಗ, ಕೆ.ಡಿ. ಶೆಟ್ಟಿ, ರವೀಂದ್ರನಾಥ ಎಂ. ಭಂಡಾರಿ, ಕಿಶನ್ ಶೆಟ್ಟಿ ಮುಂಬೈಯವರು ಉಪಸ್ಥಿತರಿರುವರು.

ಬಹುಮಾನ ವಿತರಣೆಯನ್ನು ಬರೋಡ ತುಳುಕೂಟದ ಅಧ್ಯಕ್ಷ ಶಶಿಧರ್ ಬಿ. ಶೆಟ್ಟಿಯವರು ನೆರವೇರಿಸಲಿದ್ದಾರೆ. ರಾತ್ರಿ 7.00ರಿಂದ 9.00ರವರೆಗೆ ಅಕಾಡೆಮಿಗಳ ಪ್ರಾಯೋಜಿತ ಕಲಾ ಪ್ರದರ್ಶನ ನಡೆಯಲಿದೆ“ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ದಾಮೋದರ ನಿಸರ್ಗ, ವಿಜಯಲಕ್ಷ್ಮಿ ಬಿ. ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ್, ಪ್ರಧಾನ ಕಾರ್ಯದರ್ಶಿ ಮುಚ್ಚಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ದೇವಾಡಿಗ, ರಾಜೇಶ್ ಆಳ್ವ, ಪ್ರಧಾನ ಕಾರ್ಯದರ್ಶಿ ಮುಲ್ಕಿ ಕರುಣಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Comments are closed.