ಕರಾವಳಿ

ಮಂಗಳೂರು ದಸರಾ ಸಂಪನ್ನ : ವರ್ಣರಂಜಿತ ಶೋಭಾಯಾತ್ರೆಯ ಇನ್ನಷ್ಟು ವಿಶೇಷ ಚಿತ್ರಗಳು

Pinterest LinkedIn Tumblr

ಮಂಗಳೂರು,ಆಕ್ಟೋಬರ್.14: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ವೈಭವದ ಮಂಗಳೂರು ದಸರಾ ಮಹೋತ್ಸವ ವರ್ಣರಂಜಿತ ಮೆರವಣಿ ಅ.13ರ ರವಿವಾರ ಸಂಜೆ ಆರಂಭಗೊಂಡು ಸೋಮವಾರ ಮುಂಜಾನೆ ಕುದ್ರೋಳಿ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಶ್ರೀ ಶಾರದ ಮಾತೆ ಹಾಗೂ ನವದುರ್ಗೆಯರ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಂಪನ್ನ ಗೊಂಡಿತ್ತು.

ಸಾಲು ಸಾಲು ಬಣ್ಣದ ಕೊಡೆಗಳು, ಕಿವಿಗಡಚಿಕ್ಕುವ ಚೆಂಡೆ ವಾದನ,, ಭಜನಾ ತಂಡಗಳ ಶಿಸ್ತುಬದ್ಧ ಕುಣಿತ, ಕೋಲಾಟ, ವೀರಗಾಸೆ, ಕಂಸಾಳೆ , ಡೋಲು, ಜಾಗಟೆ, ಕೊಂಬು, ಕಹಳೆಯ ನಿನಾದ, ಮುಗಿಲು ಮುಟ್ಟಿದ ಭಕ್ತರ ಜಯಘೋಷ, ವೈವಿಧ್ಯಮಯ ನೃತ್ಯ, ಅಲ್ಲಲ್ಲಿ ಸಂಗೀತದ ರಸದೌತಣದ ಮೂಲಕ ಶ್ರೀ ಮಹಾಗಣಪತಿ, ಶಾರದೆ, ಆದಿಶಕ್ತಿ, ಶ್ರೀ ಕ್ಷೇತ್ರದ ವಿಶಿಷ್ಟ ಪರಂಪರೆಯಾದ ನವದುರ್ಗೆಯರ ಶೋಭಾಯಾತ್ರೆಯು ರವಿವಾರ ಸಂಜೆ ಕುದ್ರೋಳಿ ಶ್ರೀ ಗೋಕರ್ಣಣಾಥೇಶ್ವರ ದೇವಳದಿಂದ ಪ್ರಾರಂಭವಾಗೊಂಡಿತ್ತು.

ಕರಾವಳಿಯ ವಿವಿಧ ಪುಣ್ಯಕ್ಷೇತ್ರಗಳಿಂದ ಪ್ರವರ್ತಿತ ಧಾರ್ಮಿಕ- ಸಾಂಸ್ಕೃತಿಕ ಸ್ತಬ್ಧಚಿತ್ರ, ಹುಲಿವೇಷ, ನೃತ್ಯರೂಪಕಗಳು, ದೇಶದ ಪರಂಪರೆಯ ಟ್ಯಾಬ್ಲೋಗಳು, ತ್ರಿಶೂರಿನ ಬಣ್ಣದ ಕೊಡೆ, ಕೇರಳದ ಚೆಂಡೆವಾದ್ಯ, ಕಲ್ಲಡ್ಕ ಶಿಲ್ಪಾಗೊಂಬೆಗಳು, ಬೆಂಗಳೂರಿನ ವಾದ್ಯತಂಡ, ಮಹಾರಾಷ್ಟ್ರದ ಡೋಲುನೃತ್ಯ, ಕರ್ನಾಟಕದ ಜಾನಪದ ವೈವಿಧ್ಯ… ಹೀಗೆ ಶೋಭಾಯಾತ್ರೆಗೆ ಮತ್ತಷ್ಟು ಮೆರುಗು ತುಂಬಿತು. ಶೋಭಾಯಾತ್ರೆಯುದ್ದಕ್ಕೂ ಸೇರಿದ ಅಪಾರ ಜನಸ್ತೋಮ ಸಂಭ್ರಮಿಸಿತು.

ಸಾಗರದಂತೆ ಹರಿದು ಬಂದ ಲಕ್ಷಾಂತರ ಭಕ್ತರು ವರ್ಣಮಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಗರವು ಪೂರ್ತಿ ವರ್ಣಮಯ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿತು. ಶೋಭಾಯಾತ್ರೆ ಸಾಗಿದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಸ್ವಾಗತ ಕೋರುವ ದೇವಿಯ ಚಿತ್ರದ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಅಲ್ಲಲ್ಲಿ ಭಕ್ತಾಧಿಗಳು ಆರತಿ ಪೂಜೆ ಸಲ್ಲಿಸಿದರು. ಮೆರವಣಿಗೆ ವೀಕ್ಷಿಸಲು ಮಕ್ಕಳು, ಮಹಿಳೆಯರು ಸೇರಿದಂತೆ ಲಕ್ಷಾಂತರ ಮಂದಿ ಸಂಜೆಯಿಂದಲೇ ರಸ್ತೆ ಪಕ್ಕದಲ್ಲಿ ಗುಂಪುಗುಂಪಾಗಿ ನೆರೆದಿದ್ದರು.

ಶೋಭಾಯಾತ್ರೆಯು ಮಣ್ಣಗುಡ್ಡೆ, ಲೇಡಿಹಿಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್, ನವಭಾರತ್ ವೃತ್ತ, ಎಂಜಿ ರಸ್ತೆ, ಕೆ‌.ಎಸ್‌.ರಾವ್ ರಸ್ತೆ, ಹಂಪನಕಟ್ಟೆ, ಜಿ‌ಎಚ್‌ಎಸ್ ರಸ್ತೆ ,ಮೋಹಿನಿ ವಿಲಾಸ, ಓಂಮಹಲ್ ಜಂಕ್ಷನ್, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಲೋವರ್ ಕಾರ್‌ಸ್ಟ್ರೀಟ್, ನ್ಯೂಚಿತ್ರಾ ಟಾಕೀಸ್, ಅಳಕೆ ಮೂಲಕ ಸಾಗಿ ಮತ್ತೆ ಕುದ್ರೋಳಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಮಂಗಳೂರು ದಸರಾ ಅ.14ರಂದು ಸೋಮವಾರ ಮುಂಜಾನೆ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಸಂಪನ್ನಗೊಂಡಿತು.

Click Here

ಮಂಗಳೂರು ದಸರಾ ವೈಭವದ ಶೋಭಾಯಾತ್ರೆ ಆರಂಭ : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ತೆರೆ

Comments are closed.