ಕರ್ನಾಟಕ

ಔಷಧಿ ಖರೀದಿ ಖಾದರ್ ವಿರುದ್ಧ ಎಸಿಬಿಗೆ ದೂರು

Pinterest LinkedIn Tumblr

khader_2475388gಬೆಂಗಳೂರು, ಮೇ ೨೦- ರಾಜ್ಯ ಆರೋಗ್ಯ ಅಭಿಯಾನ ಯೋಜನೆಯ ಅಧಿಕಾರಿಗಳು ಹಾಗೂ ಬಿಬಿಎಂಪಿ ಆರೋಗ್ಯ ಇಲಾಖಾಧಿಕಾರಿಗಳು ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸುಮಾರು ೧೪೬೩ ಕೋಟಿ ರೂ. ಗಳಿಗೂ ಹೆಚ್ಚು ಔಷಧಿ ಪೂರೈಕೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ.
ಅಭಿಯಾನದ ಸಹ ಅಧ್ಯಕ್ಷರಾಗಿರುವ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಈ ಹಗರಣದಲ್ಲಿ ಪ್ರಮುಖ ಪಾಲುದಾರರಾಗಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಅವರು ಆಗ್ರಹಪಡಿಸಿದ್ದಾರೆ. ಈ ಸಂಬಂಧ ಸಿಬಿಐ ಕಚೇರಿ, ಎಸಿಬಿ ಭ್ರಷ್ಟಾಚಾರ ನಿಗ್ರಹ ದಳಕ್ಕೂ ದೂರನ್ನು ಸಲ್ಲಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಚಿವ ಖಾದರ್ ಅವರೊಂದಿಗೆ ಆರೋಗ್ಯ ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿ, ಮುಖ್ಯ ಹಣಕಾಸು ಅಧಿಕಾರಿ, ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಉಪಕಾರ್ಯದರ್ಶಿಗಳು ಹಾಗೂ ಇಲಾಖಾ ಆಯುಕ್ತರು ಹಗರಣದ ರೂವಾರಿಗಳಾಗಿದ್ದಾರೆ ಎಂದು ಆರೋಪಿಸಿದರು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿ ೨೦೧೫-೧೬ನೇ ಸಾಲಿನಲ್ಲಿ ಡ್ರಗ್ಸ್ ಲಾಜಿಸ್ಟಿಕ್ ಸೊಸೈಟಿಗೆ ೪೪ ಕೋಟಿ ೪ ಲಕ್ಷದ ೩೧ ಸಾವಿರದ ೯೦೨ ರೂ. ಗಳನ್ನು ಆರು ರೆಫೆರೆಲ್ ಆಸ್ಪತ್ರೆಗಳು, ೨೭ ಹೆರಿಗೆ ಆಸ್ಪತ್ರೆಗಳು, ೩೮ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಎಲ್ಲ ರೋಗಿಗಳಿಗೂ ಉಚಿತವಾಗಿ ಔಷಧ ಒದಗಿಸಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೇಂದ್ರ ಸರ್ಕಾರದ ಈ ಯೋಜನೆಗೆ ಮಣ್ಣೆರಚಲಾಗಿದೆ ಎಂದು ಆಪಾದಿಸಿದರು.
೮೨ ವಿವಿಧ ಔಷಧಿ ಕಂಪನಿಗಳಿಂದ ಔಷಧಗಳನ್ನು ಪೂರೈಸಲಾಗಿದೆ ಎಂದು ಡ್ರಗ್ಸ್ ಸೊಸೈಟಿ ದಾಖಲೆಗಳಲ್ಲಿ ಹೇಳಿದೆ. ಆದರೆ ೧೫ಕ್ಕೂ ಹೆಚ್ಚು ಕಂಪನಿಗಳು ಅಸ್ತಿತ್ವದಲ್ಲೇ ಇಲ್ಲ. ಇನ್ನುಳಿದ ಕಂಪನಿಗಳು ಕಳಪೆ ಗುಣಮಟ್ಟದ ಔಷಧ ತಯಾರಿಕಾ ಸಂಸ್ಥೆಗಳಾಗಿವೆ ಎಂದು ಎನ್.ಆರ್. ರಮೇಶ್ ದೂರಿದರು. ಇಷ್ಟೆ ಅಲ್ಲದೆ, ವಂಚಕ ಔಷಧ ತಯಾರಿಕಾ ಸಂಸ್ಥೆಗಳಿಂದ ಔಷಧಿಯ ಮೂಲ ಬೆಲೆಗಿಂತ ೧೫ ಪಟ್ಟು ಹೆಚ್ಚು ದರಗಳನ್ನು ನಮೂದಿಸಲಾಗಿದೆ.
ಅಲ್ಲದೆ, ಕಚೇರಿ ಅವಧಿ ಮುಗಿದ ನಂತರ, ಅಧಿಕಾರಿಗಳು ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆಪಾದಿಸಿದರು.
ಉದಾಹರಣೆಗೆ ೨೫೦ ಎಂ.ಜಿ. ಅಮೋಕ್ಸಿ ಸಿಲಿಂಗ್ ನೈಜ ದರ ೧೧ ರೂ. ೭೫ ಪೈಸೆ, ಅಜಿತ್ರೋ ಮೈಸಿನ್ ೨೩ ರೂ., ಕೆಫಿಕ್ ಸಿಮ್ ೩೫ ರೂ. ೨೦ ಪೈಸೆ ಆಗಿದ್ದರೆ, ಕ್ರಮವಾಗಿ ಔಷಧ ಕಂಪನಿಗಳಿಂದ ೧೪೭.೪೧, ೨೮೮.೬೯, ೩೨೨.೪೯ ರೂ. ಎಂದು ನಮೂದಿಸಿ ಕೋಟ್ಯಂತರ ರೂ. ಹಗಲು ದರೋಡೆ ನಡೆಸಿದ್ದಾರೆ ಎಂದು ಆಪಾದಿಸಿದರು.

Comments are closed.