ಬೆಂಗಳೂರು, ಮೇ ೨೬-ಅರಣ್ಯ ಹಕ್ಕು ಸಮಿತಿಗಳ ಮುಂದೆ ಬಂದಿರುವ ಅರ್ಜಿಗಳ ವಿಲೇವಾರಿ ಆಗುವತನಕ ಬುಡಕಟ್ಟು ಹಾಗೂ ಪಾರಂಪರಿಕ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ್ ರೈ ಅವರು ಇಂದಿಲ್ಲಿ ಸ್ಪಷ್ಟಪಡಿಸಿದರು
ಸಾಗುವಳಿಗೆ ಅನುಮತಿ ಮತ್ತಿತರ ಬೇಡಿಕೆಗಳನ್ನೊಳಗೊಂಡ ಅರ್ಜಿಗಳು ಅರಣ್ಯ ಸಮಿತಿಗಳ ಮುಂದೆ ಬಂದಿದ್ದು, ಅವುಗಳನ್ನು ಹಂತ ಹಂತವಾಗಿ ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.
ಇದುವರೆಗೂ ಅರಣ್ಯ ಹಕ್ಕು ಸಮಿತಿಗಳ ಮುಂದೆ 2 ಲಕ್ಷ 90 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಈ ಪೈಕಿ ಸುಮಾರು 1 ಲಕ್ಷ 31 ಸಾವಿರ ಅರ್ಜಿಗಳು ತಿರಸ್ಕೃತಗೊಂಡಿವೆ. ಇವುಗಳನ್ನು ಕೂಡಾ ಮತ್ತೊಮ್ಮೆ ಪರಿಶೀಲಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.
ಉಳಿದ ಅರ್ಜಿಗಳ ಪ್ರಕ್ರಿಯೆಯೂ ಮುಂದುವರೆದಿದೆ. ಬುಡಕಟ್ಟು ಜನಾಂಗದವರ ಅರ್ಜಿಗಳನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡಬೇಕು ಎಂಬ ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದರು.
ಗ್ರಾಮ ಮಟ್ಟದಲ್ಲಿ ಅರಣ್ಯ ಹಕ್ಕು ಸಮಿತಿಗಳಿರುತ್ತವೆ. ಗ್ರಾಮ ಸಭೆಗಳ ಅಧೀನದಲ್ಲಿ ಇವು ಕೆಲಸ ಮಾಡುತ್ತವೆ. ಅದಾದ ನಂತರ ಉಪವಿಭಾಗ ಮಟ್ಟದ ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳಿರುತ್ತವೆ. ಮೂರು ಹಂತದಲ್ಲಿ ಅರ್ಜಿಗಳ ಪರಿಶೀಲನೆಗೆ ಅವಕಾಶವಿದ್ದು ಮೂರು ಸಮಿತಿಗಳಲ್ಲಿ ತಿರಸ್ಕೃತಗೊಂಡ ಅರ್ಜಿದಾರರು ನ್ಯಾಯಾಲಯಕ್ಕೆ ಮೊರೆ ಹೋಗಬಹುದಾಗಿದೆ ಎಂದರು.
ಅರಣ್ಯ ಹಕ್ಕು ಸಮಿತಿಗಳಲ್ಲಿ ಕೇವಲ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇರುವುದಿಲ್ಲ. ಕಂದಾಯ ಮತ್ತಿತರ ಇಲಾಖೆಗಳ ಅಧಿಕಾರಿಗಳೂ ಇರುತ್ತಾರೆ ಎಂದರು.
ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯವಾಸಿಗಳು ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿಗಳಿಗೆ ಅನುಮತಿಪತ್ರ ಮತ್ತು ತಾವು ವಾಸವಿರುವ ಮನೆ, ಮತ್ತಿತರ ಜಾಗಗಳನ್ನು ಮಾನ್ಯ ಮಾಡಿ ಅವರ ಸುಪರ್ದಿಗೆ ಕೊಡಬೇಕು ಎಂಬ ಅರ್ಜಿಗಳು ಬಂದಿವೆ. ಅವುಗಳೆಲ್ಲಾ ಸೂಕ್ತವಾಗಿದ್ದರೆ ಸಾಗುವಳಿ ಮಾಡಿಕೊಳ್ಳುವ ಅಧಿಕಾರ ಪತ್ರವನ್ನು ಅರಣ್ಯವಾಸಿಗಳಿಗೆ ಕೊಡುತ್ತೇವೆ ಆದರೆ ಅವರ ಜಮೀನು ಸರ್ಕಾರದ ಸುಪರ್ದಿನಲ್ಲಿರುತ್ತದೆ. ಸಾಗುವಳಿದಾರರು ಪರಭಾರೆ ಮಾಡುವಂತಿಲ್ಲ ಎಂದರು.
ಇದುವರೆಗೂ 9,115 ಜನರ ಹಕ್ಕುಗಳನ್ನು ಮಾನ್ಯ ಮಾಡಿದ್ದು, 3865 ಎಕರೆ ಅರಣ್ಯ ಭೂಮಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ
Comments are closed.