ಬೆಂಗಳೂರು, ಮೇ ೨೬- ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಕಾರ್ಮೋಡಗಳೆಲ್ಲಾ ಪಕ್ಕಕ್ಕೆ ಸರಿದಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಉಳಿದೆರಡು ವರ್ಷಗಳ ಅವಧಿಯನ್ನು ನಿರಾಳವಾಗಿ ಪೂರೈಸುವ ವಾತಾವರಣ ನಿರ್ಮಾಣವಾಗಿದೆ.
ಇತ್ತೀಚೆಗೆ ನಡೆದ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ವರದಾನವಾಗಿದೆ. ಸೋಲಿನಿಂದ ಕೆಂಗೆಟ್ಟಿರುವ ಹೈಕಮಾಂಡ್ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ದುಸ್ಸಾಹಸಕ್ಕೆ ಕೈಹಾಕಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸಿದ್ದು `ಸೇಫ್’ ಆಗಿದ್ದಾರೆ.
ಈಗಾಗಲೇ ಮೂರು ವರ್ಷ ಮುಖ್ಯಮಂತ್ರಿಯಾಗಿ ಅವಧಿ ಪೂರೈಸಿರುವ ಸಿದ್ಧರಾಮಯ್ಯನವರು ಉಳಿದೆರಡು ವರ್ಷ ಅಧಿಕಾರದಲ್ಲಿ ಮುಂದುವರೆಯುವುದು ನಿಚ್ಚಳವಾಗಿದೆ.
ಸಂಪುಟ ಪುನರ್ ರಚನೆಯಂತಹ ಕೆಲಸಕ್ಕೆ ಕೈ ಹಾಕಿದರೆ ‘ಜೇನುಗೂಡಿಗೆ ಕಲ್ಲು ಹೊಡೆದಂತೆ’ ಎಂಬುದನ್ನು ಅರಿತಿರುವ ಸಿದ್ಧರಾಮಯ್ಯ, ಬರ ಪರಿಸ್ಥಿತಿಯ ನೆಪದಲ್ಲಿ ಸಂಪುಟ ಪುನರ್ ರಚನೆ ವಿಚಾರವನ್ನೂ ಬದಿಗೊತ್ತಿದ್ದಾರೆ. ಇದರಿಂದಾಗಿ ಅವರ ನಾಯಕತ್ವದ ವಿರುದ್ಧ ಅಪಸ್ವರಗಳು ಕೇಳಿಬರುವ ಪರಿಸ್ಥಿತಿಯೂ ದೂರವಾಗಲಿದೆ.
ಇರುವ ಸಂಪುಟ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ಪೂರೈಸುವತ್ತ ಚಿತ್ತ ಹರಿಸಿದ್ದಾರೆ.
ಸಿದ್ಧರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಕಾಂಗ್ರೆಸ್ ಪಕ್ಷದಲ್ಲೇ ಎದ್ದಿದ್ದ ಕೂಗು ತಾನೇ ತಾನಾಗಿ ತಣ್ಣಗಾಗಿದೆ.
ಕಾಂಗ್ರೆಸ್ ಪಕ್ಷ ಒಂದೊಂದೆ ರಾಜ್ಯಗಳಲ್ಲಿ ಹಂತ ಹಂತವಾಗಿ ಅಧಿಕಾರ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ದಿನೇದಿನೇ ಶಕ್ತಿ ಹೀನವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿದ್ಧರಾಮಯ್ಯ ರವರನ್ನು ಬದಲಾಯಿಸುವ ದುಸ್ಸಾಹಸಕ್ಕೆ ಕೈಹಾಕುವ ಸ್ಥಿತಿಯಲ್ಲಿಲ್ಲ.
ಮೂಲ ಕಾಂಗ್ರೇಸಿಗರು, ವಲಸೆ ಕಾಂಗ್ರೇಸಿಗರ ನಡುವಿನ ಮುಸುಕಿನ ಗುದ್ದಾಟ ಏನೇ ಇದ್ದರೂ ಸಿದ್ಧರಾಮಯ್ಯ ನಾಯಕತ್ವ ಅಭಾದಿತವಾಗಿ ಮುಂದುವರೆಯಲಿದೆ.
ಇಡೀ ದೇಶದಲ್ಲಿ ದೊಡ್ಡ ರಾಜ್ಯಗಳ ಪೈಕಿ ಒಂದಾದ ಕರ್ನಾಟಕದಲ್ಲಿ ಮಾತ್ರವೆ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಕೈ ಹಾಕಿದರೆ ಈ ರಾಜ್ಯವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹಾಗಾಗಿ ಸಿದ್ಧರಾಮಯ್ಯ ಅವರ ಪರಿಸ್ಥಿತಿ “ಆನೆ ನಡೆದಿದ್ದೇ ದಾರಿ” ಎಂಬಂತಾಗಿದೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಎದುರಾದಲೋಕಸಭೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಸೇರಿದಂತೆ ಹಲವಾರು ಚುನಾವಣೆಗಳಲ್ಲಿ ನಿರೀಕ್ಷಿತ ಗೆಲುವನ್ನು ಪಕ್ಷಕ್ಕೆ ತಂದುಕೊಡದಿದ್ದರೂ ಸಿದ್ಧರಾಮಯ್ಯನವರ ಸ್ಥಾನ ಮಾತ್ರ ದಿನೇದಿನೇ ಸುಭದ್ರವಾಗುತ್ತಿರುವುದು ಸ್ಪಷ್ಟವಾಗಿದೆ.
ಕರ್ನಾಟಕ
Comments are closed.