ಕರ್ನಾಟಕ

ಉಪಲೋಕಾಯುಕ್ತ ಅಡಿ ಕಾರ್ಯನಿರ್ವಹಣೆ ಹಾದಿ ಸುಗಮ ಸ್ಪೀಕರ್ ಕಾಗೋಡು ಸ್ಪಷ್ಟನೆ

Pinterest LinkedIn Tumblr

kagoಬೆಂಗಳೂರು, ಮೇ ೨೭- ಅಧಿಕಾರ ದುರುಪಯೋಗ ಹಾಗೂ ದುರ್ವರ್ತನೆ ಆರೋಪಗಳಿಂದ ಮುಕ್ತರಾಗಿರುವ ಉಪಲೋಕಾಯುಕ್ತ ನ್ಯಾ. ಸುಭಾಷ್ ಬಿ. ಅಡಿ ಅವರು ಎಂದಿನಂತೆ ಕಾರ್ಯನಿರ್ವಹಿಸಬಹುದಾಗಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಇಂದಿಲ್ಲಿ ತಿಳಿಸಿದರು.

ಸುಭಾಷ್ ಬಿ ಅಡಿ ಅವರ ವಿರುದ್ಧದ ಆರೋಪಗಳನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ನೇತೃತ್ವದ ಸಮಿತಿ ತಳ್ಳಿ ಹಾಕಿ ಕ್ಲೀನ್‌ಚಿಟ್ ನೀಡಿರುವುದರಿಂದ ಅಡಿ ಅವರು ತಮ್ಮ ಕಾರ್ಯಕಲಾಪಗಳನ್ನು ಮುಂದುವರೆಸಬಹುದಾಗಿದೆ ಎಂದು ಅವರು ಹೇಳಿದರು.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾ. ಸುಭಾಷ್ ಬಿ. ಅಡಿ ಅವರ ವಿರುದ್ಧ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಆರೋಪ ಮುಕ್ತರಾಗಿದ್ದಾರೆ ಎಂದರು.

ಕಾಂಗ್ರೆಸ್ ಶಾಸಕ ತನ್ವೀರ್‌ಸೇಠ್ ಸೇರಿದಂತೆ 78 ಮಂದಿ ಶಾಸಕರು ಅಡಿ ಅವರನ್ನು ಪದಚ್ಯುತಿಗೊಳಿಸಬೇಕೆಂದು ಮಂಡಿಸಿದ್ದ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ಅವರು ಹೇಳಿದರು.

ಶಾಸಕಾಂಗದ ನಿಯಮಾವಳಿಗಳ ಪ್ರಕಾರ ಶಾಸಕರು ಸಲ್ಲಿಸಿದ್ದ ಪದಚ್ಯುತಿ ಪ್ರಸ್ತಾವನೆಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಹೈಕೋರ್ಟ್ ಆದೇಶದಂತೆ ನ್ಯಾ. ಬೂದಿಹಾಳ್ ನೇತೃತ್ವದ ಸಮಿತಿ ತನಿಖೆ ಮಾಡಿ ಸುಭಾಷ್ ಬಿ. ಅಡಿ ವಿರುದ್ಧ ಕೇಳಿ ಬಂದ ಐದು ಆರೋಪಗಳಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಿರುವುದರಿಂದ ಅವರು ಈಗ ಆರೋಪ ಮುಕ್ತವಾಗಿದ್ದು, ಕಛೇರಿ ಕೆಲಸಗಳನ್ನು ಮುಂದುವರೆಸಬಹುದಾಗಿದೆ ಎಂದರು.

ಈ ವಿಚಾರದಲ್ಲಿ ವಿಧಾನಸಭಾಧ್ಯಕ್ಷನಾಗಿ ನನ್ನ ಕರ್ತವ್ಯವನ್ನು ಪಾಲಿಸಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Comments are closed.