ಬೆಂಗಳೂರು: ಡಿವೈಎಸ್ಪಿ ಹುದ್ದೆಗೆ ಅನುಪಮಾ ಶೆಣೈ ನೀಡಿದ್ದ ರಾಜೀನಾಮೆಯನ್ನು ಸರಕಾರ ಅಂಗೀಕರಿಸಿದೆ.
ಎರಡು ದಿನಗಳ ಹಿಂದಷ್ಟೆ ರಾಜೀನಾಮೆ ಅಂಗೀಕರಿಸದೇ ಮನವೊಲಿಸುವಂತೆ ಮುಖ್ಯಮಂತ್ರಿಯವರು ಮಹಾನಿರ್ದೇಶಕರಿಗೆ ಖುದ್ದು ಸೂಚಿಸಿದ್ದರು. ಆದರೆ, ಏಕಾಏಕಿ ನಿರ್ಧಾರ ಬದಲಿಸಿದ ಸರಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆಯನ್ನು ಅಂಗೀಕರಿಸುವ ತೀರ್ಮಾನಕ್ಕೆ ಬಂದಿತು.
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಡಿವೈಎಸ್ಪಿಯಾಗಿದ್ದ ಅನುಪಮಾ ಅವರು ತಮ್ಮ ಕಾರ್ಯವೈಖರಿಯಿಂದಲೇ ಹೆಸರಾಗಿದ್ದರು. ವಿಶೇಷವೆಂದರೆ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರ ಮೊಬೈಲ್ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಅನುಪಮಾ ಅವರನ್ನು ವರ್ಗಾವಣೆ ಮಾಡಲಾಯಿತೆಂಬ ಸುದ್ದಿ ಸಾಕಷ್ಟು ಸದ್ದು ಮಾಡಿತು.
ಇತ್ತೀಚೆಗೆ ಮದ್ಯದಂಗಡಿ ತೆರವು ವಿಚಾರದಲ್ಲಿ ನಡೆದ ರಾಜಕೀಯಕ್ಕೆ ಬೇಸತ್ತು ಜೂ.4ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಅಜ್ಞಾತ ಸ್ಥಳದಲ್ಲಿದ್ದರು. ನಂತರದ ಬೆಳವಣಿಯು ಫೇಸ್‌ಬುಕ್‌ನಿಂದಲೇ ಹೆಚ್ಚು ಜನಜನಿತವಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ವಿವಿಧ ಮಠಾಧೀಶರು ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿ ರಾಜೀನಾಮೆ ಹಿಂಪಡೆಯುವಂತೆ ಅನುಪಮಾ ಅವರನ್ನು ಒತ್ತಾಯಿಸಿದ್ದರು. ಜತೆಗೆ ಸರಕಾರವನ್ನೂ ತರಾಟೆಗೆ ತೆಗೆದುಕೊಂಡರು.
ಈ ಮಧ್ಯೆ ಗುರುವಾರ ಮಾಧ್ಯಮದೆದುರು ಕಾಣಿಸಿಕೊಂಡ ಅನುಪಮಾ ಶೆಣೈ, ತಾವು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಸ್ಪಷ್ಟಪಡಿಸಿದ್ದರು.
Comments are closed.