ಕರ್ನಾಟಕ

ಈಗ ನಾನು ಕಾಂಗ್ರೆಸ್ಸಿಗ : ಮುಂದಿನ ಸಲ ಜೆಡಿಎಸ್‌ನಿಂದಲೇ ಸ್ಪರ್ಧಿಸುತ್ತೇನೆ

Pinterest LinkedIn Tumblr

jkf

ಬೆಂಗಳೂರು,ಜೂ.10-ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವುದಾಗಿ ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ತಿಳಿಸಿದ್ದಾರೆ. ಕಾಂಗ್ರೆಸ್‌ನ ಶಾಸಕನಾಗಿ ನಾನು, ನಮ್ಮ ಪಕ್ಷದ ನಾಯಕರು ನೀಡಿರುವ ಆದೇಶವನ್ನು ಪಾಲಿಸುತ್ತೇನೆ. ಇನ್ನು ಎರಡು ವರ್ಷ ಇದೇ ಪಕ್ಷದಲ್ಲಿ ಜನಪರವಾದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೇನೆ. ಆದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿಯುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ವಿಧಾನಸೌಧದಲ್ಲಿಂದು ವಿಧಾನಪರಿಷತ್‌ನ ಚುನಾವಣೆಯಲ್ಲಿ ಮತ ಚಲಾಯಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 60 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ. ಅಲ್ಲಿನ ಜನರು ನೋವಿನಲ್ಲಿದ್ದಾರೆ. ಆ ಭಾಗದ ಜನರ ದನಿಗೆ ಸ್ಪಂದಿಸುವವರೆಗೂ ನನ್ನ ಸಾರ್ವಜನಿಕ ಜೀವನದುದ್ದಕ್ಕೂ ಹೋರಾಟ ನಡೆಸುತ್ತೇನೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಸಭೆಗೆ ಸ್ಪರ್ಧಿಸುತ್ತಿರುವ ಆಸ್ಕರ್ ಫರ್ನಾಂಡಿಸ್, ಜಯರಾಮ್ ರಮೇಶ್ ಮತ್ತಿತರ ಮುಖಂಡರು ನನ್ನನ್ನು ಭೇಟಿ ಮಾಡಿದ್ದರು. ಅವರನ್ನು ಈಗಲೂ ನಾನು ಗೌರವಿಸುತ್ತೇನೆ.

ನಾನೆಂದೂ ಕಾಂಗ್ರೆಸ್ ವಿರುದ್ದ ಮಾತನಾಡಿಲ್ಲ. ಆದರೂ ನನ್ನನ್ನು ಅಮಾನತು ಮಾಡಿದ್ದು ಏತಕ್ಕೆ ಎಂಬುದು ನನಗೆ ತಿಳಿದಿಲ್ಲ. ಆದರೂ ಪಕ್ಷದಡಿಯಲ್ಲೇ ಇನ್ನು ಎರಡು ವರ್ಷ ನಿಷ್ಠೆಯಿಂದ ಇರುತ್ತೇನೆ. ಆದೇಶ ಪಾಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಕುಮಾರಸ್ವಾಮಿಯವರ ಜೊತೆ ಗೆಳೆತನ ಹೊಸದೇನಲ್ಲ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ, ಸ್ನೇಹವಿದೆ. ಪಕ್ಷಗಳು ಬೇರೆಯಾದರೂ ಸಂಬಂಧಗಳು ಹೋಗುವುದಿಲ್ಲ ಎಂದು ಹೇಳಿದರು.

Comments are closed.