ಪನಾಮಾ ಸಿಟಿ,ಜೂ15 : ಅಮೆರಿಕವು ಉದ್ಯಮಿಯೊಬ್ಬರಿಗೆ ಹೇರಿರುವ ನಿರ್ಬಂಧವು ಈಗ ಪನಾಮಾದ 167 ವರ್ಷಗಳಷ್ಟುಹಳೆಯ ಪತ್ರಿಕೆಯೊಂದನ್ನು ಮುಚ್ಚುವ ಹಂತಕ್ಕೆ ತಲುಪಿಸಿದೆ.
ದೇಶವು ಸ್ವಾತಂತ್ರ್ಯ ಪಡೆಯುವ ಮೊದಲೇ ದೈನಿಕ ಲಾ ಎಸ್ಟೆರಲ್ಲಾ ಡಿ ಪನಾಮಾ ಮತ್ತು ಸಹೋದರಿ ಸಂಸ್ಥೆ ಎಲ್ ಸಿಗ್ಲೋ ಅಸ್ತಿತ್ವದಲ್ಲಿದ್ದವು. ಈಗ ಕಂಪನಿಯ ಪ್ರಮುಖ ಷೇರುದಾರರಾದ ಅಬ್ದುಲ್ ವಾಕೆದ್(66) ವಿರುದ್ಧ ಅಮೆರಿಕದಲ್ಲಿ ಗಂಭೀರ ಆರೋಪ ಕೇಳಿಬಂದಿದೆ. ಭಾರಿ ಪ್ರಮಾಣದ ಡ್ರಗ್ ಸಾಗಣೆಗಾಗಿ ಹವಾಲಾ ಹಣದ ವಹಿವಾಟು ನಡೆಸಿದ ಆರೋಪದ ಮೇರೆಗೆ ಅಮೆರಿಕವು ವಾಕೆದ್ರ ಮೇಲೆ ನಿರ್ಬಂಧ ಹೇರಿದೆ.
ಅವರ ಮಾಲೀಕತ್ವದ ಮಳಿಗೆಗಳು, ಬ್ಯಾಂಕು, ರಿಯಲ್ ಎಸ್ಟೇಟ್ ಕಂಪನಿ, ಮಾಲ್ಗಳು ಸೇರಿದಂತೆ ಎಲ್ಲ ಆಸ್ತಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆದರೆ, ಪನಾಮಾ ಪತ್ರಿಕೆಗಳ ಕಾರ್ಯನಿರ್ವಹಣೆ ಮುಂದುವರಿಸುವಂತೆ ಅಮೆರಿಕದ ಇಲಾಖೆಯು ವಿಶೇಷ ಪರವಾನಗಿಯನ್ನು ನೀಡಿದೆ.
ಹೀಗಿದ್ದರೂ, ಈ ಎಲ್ಲ ಬೆಳವಣಿಗೆಗಳಿಂದಾಗಿ ಜಾಹೀರಾತುದಾರರು ಪತ್ರಿಕೆಯಿಂದ ದೂರ ಸರಿದಿದ್ದಾರೆ. ಪತ್ರಿಕಾ ಸಂಸ್ಥೆ ಕೂಡ 300 ನೌಕರರ ಪೈಕಿ ಶೇ.6ರಷ್ಟುಮಂದಿಯನ್ನು ಕೆಲಸದಿಂದ ವಜಾ ಮಾಡಿದೆ. ಹೀಗಾಗಿ, ಈ ಎರಡೂ ಪತ್ರಿಕೆಗಳ ಭವಿಷ್ಯದ ಮೇಲೆ ಕರಿನೆರಳು ಆವರಿಸಿದೆ.
Comments are closed.