ಬೆಂಗಳೂರು: ಎಲ್ಲವೂ ಅಂದಕೊಂಡಂತಾದರೆ ಸಿಲಿಕಾನ್ ಸಿಟಿಗೆ ಅತಿ ಶೀಘ್ರದಲ್ಲಿ ಬರಲಿದೆ ಹೆಮ್ಮೆಯ ಹಾಗೂ ದೇಶದ ಅತೀ ದೊಡ್ಡ ಉಕ್ಕಿನ ಸೇತುವೆ. ಹೌದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಬಿಡಿಎ ಸಕಲ ಸಿದ್ದತೆ ನಡೆಸಿದೆ.
ಸೇತುವೆ ಕಾಮಗಾರಿ ಮುಗಿದ ನಂತರ ನಗರದ ಕೆಂದ್ರ ಭಾಗದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಕೇವಲ ೩೦ ನಿಮಿಷ ಸಾಕಾಗಲಿದೆ. ಬೆಂಗಳೂರಿನಲ್ಲಿ ದೇಶದಲ್ಲೇ ದೊಡ್ಡದೆನಿಸುವ ಸ್ಟೀಲ್ ಸೇತುವೆ ಇದ್ದಾಗಲಿದೆ. ಇದಕ್ಕಾಗಿ ಕಳೆದ ವರ್ಷ ಬಿಡಿಎ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಂಡರ್‌ಗೆ ಆಹ್ವಾನಿಸಿತ್ತು.
ಚಾಲುಕ್ಯ ಸರ್ಕಲ್‌ನಿಂದ ಹೆಬ್ಬಾಳದವರೆಗಿನ ೬.೭೭ ಕಿಮಿ ಮಾರ್ಗದಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ ೧೩೫೦ ಕೋಟಿ ರೂ. ವೆಚ್ಚವಾಗಲಿದ್ದು, ಬಿಡಿಎ ನಿರ್ಮಿಸುತ್ತಿರುವ ಅತೀ ದೊಡ್ಡ ಯೋಜನೆ ಇದಾಗಲಿದೆ. ಟೆಂಡರ್‌ನಲ್ಲಿ ಈಗಾಗಲೇ ಹಲವು ಬಹುರಾಷ್ಟ್ರೀಯ ಕಂಪನಿಗಳು ಆಸಕ್ತಿ ತೋರಿ ಭಾಗಿಯಾಗಿದ್ದವು. ಕಳೆದ ವರ್ಷ ನವೆಂಬರ್‌ನಲ್ಲಿ ಆರಂಭವಾದ ಈ ಟೆಂಡರ್ ಪ್ರಕ್ರಿಯೆ ಕೊನೆ ಹಂತಕ್ಕೆ ಬಂದಿದ್ದು. ಲಾರ್ಸೆನ್ ಆಂಡ್ ಟರ್ಬೊ ಹಾಗೂ ನವಯುಗ ಗ್ರೂಪ್ ಸಂಸ್ಥೆಗಳು ಮಾತ್ರ ಈ ಯೋಜನೆಗೆ ಆಯ್ಕೆಯಾಗಿದೆ ಎಂದು ಬಿಡಿಎ ಎಂಜಿನಿಯರ್ ಪಿ.ಎನ್. ನಾಯ್ಕ್ ತಿಳಿಸಿದ್ದಾರೆ. ಸೇತುವೆ ನಿರ್ಮಿಸುವ ಸಂಸ್ಥೆಗಳು ಕಡ್ಡಾಯವಾಗಿ ಫ್ಲೈಓವರ್ ಸೇರಿದಂತೆ ಬೃಹತ್ ಕಾಮಗಾರಿಗಳನ್ನು ನಡೆಸಿರಬೇಕು. ಇದರ ಜೊತೆಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಬೇಕೆನ್ನುವ ಷರತ್ತುಗಳನ್ನು ವಿಧಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಸುಮಾರು ೧೩೫೦ ಕೋಟಿ ರೂ. ವೆಚ್ಚದ ಈ ಸೇತುವೆಗೆ ೬೦,೦೦೦ ಟನ್‌ನಷ್ಟು ಉಕ್ಕಿನ ಅವಶ್ಯಕತೆ ಇದ್ದು, ಎರಡು ವರ್ಷದ ಅವಧಿಯಲ್ಲಿ ಉಕ್ಕಿನ ಸೇತುವೆ ನಿರ್ಮಾಣವಾಗಲಿದೆ ಎಂದು ಅವರು ವಿವರಿಸಿದ್ದಾರೆ. ಈ ಬಳಿಕ ಚಾಲುಕ್ಯ ವೃತ್ತದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕೇವಲ ೩೦ ನಿಮಿಷದಲ್ಲಿ ತಲುಪಬಹುದು. ಬೆಂಗಳೂರು ಕೇಂದ್ರ ಭಾಗದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಈಗ ಒಂದೂವರೆ ಗಂಟೆಯಿಂದ ಎರೆಡು ಗಂಟೆ ಅವಧಿ ಹಿಡಿಯಲಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಈ ಬೃಹತ್ ಯೋಜನೆ ಕೈಗೊಳ್ಳಲಾಗಿದೆ. ಕಾಂಕ್ರೀಟ್ ನಿಂದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಸಿದರೆ ಕಾಮಗಾರಿ ಅವಧಿ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್, ಬಿಡಿಎ ಜಂಕ್ಷನ್, ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್ ಹೆಬ್ಬಾಳದವರೆಗೆ ಉಕ್ಕಿನ ಸೇತುವೆ ನಿರ್ಮಾಣವಾಗಲಿದೆ. ಈ ಉಕ್ಕಿನ ಮೇಲ್ಸೇತುವೆಗೆ ಪೂರಕವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಮೇಲ್ಸೇತುವೆಯನ್ನು ೭೦ ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆ ಮಾಡಲಾಗುತ್ತದೆ. ಆ ಮೂಲಕ ಕೊಡಿಗೇಹಳ್ಳಿಯಿಂದ ಆರಂಭವಾಗುವ ಮೇಲ್ಸೇತುವೆಗೆ ಸಂಪರ್ಕ ಸಿಕ್ಕಂತಾಗುತ್ತದೆ. ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಗೊಳ್ಳಲಿದೆ. ಎರಡೂ ಕಾಮಗಾರಿ ಮುಗಿದ ನಂತರ ಚಾಲುಕ್ಯ ಸರ್ಕಲ್ ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣವಾಗಲಿದೆ. ೬.೭೭ ಕಿಮಿ ಉದ್ದ ಇರುವ ಈ ಸೇತುವೆ ನೆಲದಿಂದ ಹದಿನೆಂಟು ಅಡಿ ಎತ್ತರದಲ್ಲಿ ನಿರ್ಮಾಣವಾಗಲಿದೆ. ಆರು ಪಥಗಳ ರಸ್ತೆ ಇದಾಗಲಿದೆ. ಕೊಲ್ಕೊತಾದ ಹೌರಾದಲ್ಲಿ ಚಿಕ್ಕ ಉಕ್ಕಿನ ಸೇತುವೆ ಬಿಟ್ಟರೆ ದೇಶದಲ್ಲೇ ಇದು ನಿರ್ಮಾಣವಾಗುತ್ತಿರುವ ಎರಡನೇ ಉಕ್ಕಿನ ಸೇತುವೆಯಾಗಲಿದೆ.
ಅಲ್ಲದೇ ಈ ಸೇತುವೆ ನಿರ್ಮಾಣದ ಬಳಿಕ ಆ ರಸ್ತೆಯಲ್ಲಿ ಹಾದು ಹೋಗುವ ಅನೇಕ ಮ್ಯಾಜಿಕ್ ಬಾಂಕ್ಸ್ ಹಾಗೂ ಜಂಕ್ಷನ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ತಿರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಿಡಿಎ ಇತಿಹಾಸದಲ್ಲೇ ಮೊದಲ ಬಾರಿಗೆ ರೂಪಿಸುತ್ತಿರುವ ಭಾರಿ ಮೊತ್ತದ ಯೋಜನೆ ಇದಾಗಿದ್ದು, ಇದಕ್ಕಾಗಿ ನಡೆದ ಗ್ಲೋಬಲ್ ಟೆಂಡರ್ ಪ್ರಕ್ರಿಯೆಯಲ್ಲಿ ವಿಶ್ವದ ವಿವಿಧ ಭಾಗಗಳಿಂದ ಪ್ರತಿಕ್ರಿಯೆ ಲಭ್ಯವಾಗಿದ್ದು, ಕೆಲವು ಕಂಪನಿಗಳು ಯೋಜನೆ ಕುರಿತ ಅನುಮಾನ ಮತ್ತು ಗೊಂದಲಗಳ ಬಗ್ಗೆ ಪ್ರಶ್ನಿಸಿತ್ತು. ಅವುಗಳನ್ನು ನಿವಾರಿಸಿದ ನಂತರ ಟೆಂಡರ್‌ನ ತಾಂತ್ರಿಕ ಅನುಮೋದನೆ ಮುಗಿದ ಬಳಿಕ ಆರ್ಥಿಕ ಅನುಮೋದನೆ ಮುಗಿದು, ಆಯ್ಕೆಯಾದ ಸಂಸ್ಥೆಗಳಿಗೆ ಕಾಮಗಾರಿ ಆರಂಭಿಸಲು ಆದೇಶ ನೀಡಲಾಗುತ್ತದೆ. ಒಟ್ಟಿನಲ್ಲಿ ಏರ್‌ಪೋರ್ಟ್ ರಸ್ತೆಯಲ್ಲಿ ಸಂಚಾರ ಮಾಡುವ ಸವಾರರಿಗೆ ಈ ಸುದ್ದಿ ಸಂತಸ ನೀಡಲಿದೆ. ಯಾವಾಗ ಕಾಮಗಾರಿ ಶುರುವಾಗಿ ಮುಗಿಯುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
Comments are closed.