ಮೈಸೂರು, ಜೂ.೨೯- ಮೈಸೂರು ಸಂಸ್ಥಾನದಲ್ಲಿ ನಾಲ್ಕು ದಶಕಗಳ ಬಳಿಕ ನಡೆದ ಐತಿಹಾಸಿಕ ಮದುವೆಯೊಂದಕ್ಕೆ ಸಾಕ್ಷಿಯಾದ ವಿಶ್ವವಿಖ್ಯಾತ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ನವದಂಪತಿ ಇಂದು ಬೆಳಿಗ್ಗೆ ಮತ್ತೆ ಹಾಜರಾದರು. ಮೊನ್ನೆಯಷ್ಟೇ ಸಪ್ತಪದಿ ತುಳಿದ ನವಜೋಡಿ ಯದುವೀರ್ ಮತ್ತು ತ್ರಿಷಿಕಾ ಕುಮಾರಿ ನಿನ್ನೆ ಅರಮನೆಯ ಅಂಗಳದಲ್ಲಿ ಲವಲವಿಕೆಯಿಂದ ಕಾಣಿಸಿಕೊಂಡರು. ಮದುವೆಯ ಮರುದಿನ ನಡೆಸಬೇಕಾದ ಶಾಸ್ತ್ರಗಳಲ್ಲಿ ಭಾಗಿಯಾದರು.
ಇಂದು ಬೆಳಿಗ್ಗೆ ಪುರೋಹಿತರು, ಆಗಮಿಕರ ಸಮ್ಮುಖದಲ್ಲಿ ಇರಿಸಿದ್ದ ಹೋಮ ಕುಂಡದ ಮುಂದೆ ಕುಳಿತು ಹೋಮ ಕುಂಡಕ್ಕೆ ಅಕ್ಕಿ ಮತ್ತು ಭತ್ತದ ಕಾಳನ್ನು ಹಾಕಿ ನಿತ್ಯಕರ್ಮ ಔಪಾಸನೆ ಮತ್ತು ಫಲ ಪೂಜೆಯ ಶಾಸ್ತ್ರ ನೆರವೇರಿಸಿದರು. ಬ್ರಹ್ಮಚಾರಿಯಾಗಿದ್ದ ಯದುವೀರ್ ಗೃಹಸ್ಥಾಶ್ರಮ ಪ್ರವೇಶ ಮಾಡಿದ್ದರಿಂದ ನಿತ್ಯಕರ್ಮ ಉಪಾಸನೆ ಮಾಡಬೇಕಾದ್ದು ಪದ್ಧತಿ.
ಅದರ ಅನುಸಾರ ಅದನ್ನು ಸಾಂಘವಾಗಿ ನೆರವೇರಿಸಿದರು. ಆ ನಂತರ ನಡೆದದ್ದು ನಾರಾಯಣ ದೇವರ ಪೂಜೆ. ಅದನ್ನು ಫಲಪೂಜೆ ಅಂತಲೂ ಕರೆಯುತ್ತಾರೆ. ಎಳನೀರು ಸಮರ್ಪಣೆಯೊಂದಿಗೆ ನಡೆಯುವ ಫಲ ಪೂಜೆಯನ್ನು ಯುವ ಜೋಡಿ ಯಶಸ್ವಿಯಾಗಿ ಮುಗಿಸಿದರು.
ಅರಮನೆಯಲ್ಲಿ ನಡೆಯುವ ಎಲ್ಲಾ ಶುಭ ಸಮಾರಂಭದಲ್ಲಿ ಶಾಸ್ತ್ರಕ್ಕೆ ಅತ ಹೆಚ್ಚಿನ ಮಹತ್ವ ಕೊಡುತ್ತಾ ಬರಲಾಗಿದೆ. ಶ್ರೀಕಂಠದತ್ತರು ಬದುಕಿದ್ದಾಗಲೂ ಶಾಸ್ತ್ರಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಅದೇ ರೀತಿ ರಾಜಮಾತೆಯ ಮಾರ್ಗದರ್ಶನದಲ್ಲಿ ಯದುವೀರರು ಸಹ ಎಲ್ಲಾ ಶಾಸ್ತ್ರ-ಸಂಪ್ರದಾಯ ಪಾಲಿಸುತ್ತಿದ್ದಾರೆ. ವಿವಾಹ ಸಂದರ್ಭದಲ್ಲೂ ಅವರು ಎಲ್ಲಾ ಶಾಸ್ತ್ರಗಳಲ್ಲೂ ತಲ್ಲೀನರಾಗಿದ್ದನ್ನು ಕಾಣಬಹುದು. ಅರಮನೆಯ ಒಳಿತಿಗಾಗಿ ನಡೆಯುತ್ತಿರುವ ಪೂಜೆಗಳಲ್ಲಿ ಮಗ್ನರಾಗಿ ಅರಮನೆಯ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.
ಮರು ಮಾಂಗಲ್ಯಧಾರಣೆ
ಯದುವಂಶದರಸರಲ್ಲಿ ೨ ಬಾರಿ ತಾಲಿ ಧಾರಣೆಯ ಸಂಪ್ರದಾಯವಿದೆ. ಸೋಮವಾರ ಯದುವೀರರವರು ತ್ರಿಷಿಕಾರಿಗೆ ಚಿನ್ನದ ತಾಳಿಯನ್ನು ಧಾರಣೆ ಮಾಡಿದ್ದಾರೆ. ಇಂದು ಬೆಳಿಗ್ಗೆ ೧೧-೩೦ರ ಶುಭ ಲಗ್ನದಲ್ಲಿ ಕರಿಮಣಿಯ ಮಾಂಗಲ್ಯವನ್ನು ಧಾರಣೆ ಮಾಡಿದರು. ೧೨-೧೫ ರವರೆಗೆ ಒಳಲು ಸುತ್ತುವುದು, ನಾಕಾ ಬಲಿ ತಾಂಬೂಲ ಚರವಣ, ತೊಟ್ಟಿಲು ಶಾಸ್ತ್ರ, ಗೊಂಬೆ ಶಾಸ್ತ್ರ, ಸಂತಾನ ಗೋಪಾಲ ಪೂಜೆ, ಫಲ ಪೂಜೆ, ಆಶೀರ್ವಾದ, ಆರತಿ, ನಾಂದಿ ಹಾಗೂ ಮಂಟಪ ವಿಸರ್ಜನೆ, ದೇವರನ್ನು (ಕಳಸ) ಕೋಡಿ ಸೋಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಿಜು ಮಾಡಿಸಲಾಯಿತು. ನಂತರ ಹಣ್ಣು ಕಾಯಿ ಮಡಿಲು ತುಂಬಿ ನವ ದಂಪತಿಗಳು ಸಾಂಪ್ರದಾಯಕ ಮೆರವಣಿಗೆಯಲ್ಲಿ ಮದನವಿಲಾಸ ಬಾಗಿಲು ಮುಖಾಂತರ ಅರಮನೆ ಪ್ರವೇಶಿಸಿದರು.
ಕಾರಿನಲ್ಲಿ ಮೆರವಣಿಗೆ
ಹಿಂದೆ ಚಾಮರಾಜ ಒಡೆಯರ್ ಹಾಗೂ ಶ್ರೀಕಂಠದತ್ತ ಒಡೆಯರ್ ರವರ ವಿವಾಹ ಮಹೋತ್ಸವ ನಡೆದ ನಂತರ ಸಂಜೆ ಆನೆಯ ಮೇಲೆ ಮೆರವಣಿಗೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶವಿತ್ತು. ಆದರೆ ಇಂದು ಕಾಲ ಬದಲಾಗಿದೆ. ಆನೆಯ ಬದಲಾಗಿ ಕಾರಿನಲ್ಲಿ ವಧು-ವರರು ಮೆರವಣಿಗೆಯಲ್ಲಿ ಇಂದು ಸಂಜೆ ಪಾಲ್ಗೊಳ್ಳಲಿದ್ದಾರೆ. ಇದಾದ ನಂತರ ಯದುವೀರ್ ಮತ್ತು ತ್ರಿಷಿಕಾ ವಿವಾಹ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.
Comments are closed.