ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಬದುಕಿನ ಕುರಿತಾದ ‘ಇಟ್ಟಗುರಿ ದಿಟ್ಟಹೆಜ್ಜೆ’ ಪುಸ್ತಕವನ್ನು ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಗ್ರಂಥಾಲಯಗಳಿಗೆ ಖರೀದಿ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಮಾರ್ಚ್ 28ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಕೆ.ಆನಂದ ಅವರು ‘ಆಯುಕ್ತರ ಆದೇಶದ ಮೇರೆಗೆ’ ಆದೇಶ ಹೊರಡಿಸಿದ್ದಾರೆ.
‘ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಲಭ್ಯವಿರುವ ಯಾವುದೇ ನಿಧಿಯಿಂದ ಸಿದ್ದರಾಮಯ್ಯನವರ ರಾಜಕೀಯ ಬದುಕಿನ ಕುರಿತಾದ ‘ಇಟ್ಟಗುರಿ ದಿಟ್ಟಹೆಜ್ಜೆ’ ಪುಸ್ತಕ ಖರೀದಿಸಲು ಅನುಮತಿ ನೀಡಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.
‘ಈ ಆದೇಶದ ಮೂಲಕ ತಮ್ಮ ರಾಜಕೀಯ ಬದುಕಿನ ಕಥೆಯನ್ನು ಮಕ್ಕಳ ಮೇಲೆ ಹೇರಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಈ ಪುಸ್ತಕ ಖರೀದಿ ಆದೇಶದ ಹಿಂದೆ ರಾಜಕೀಯ ಪ್ರಭಾವವಿದೆ’ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಕರ್ನಾಟಕ ಸಾಹಿತ್ಯ ವೇದಿಕೆ ಪ್ರಕಟಿಸಿರುವ ಈ ಪುಸ್ತಕದ ಬೆಲೆ ₹ 300. ತುಮಕೂರು ಮಹದೇವಯ್ಯ ಪ್ರಧಾನ ಸಂಪಾದಕರಾಗಿರುವ ಈ ಪುಸ್ತಕವನ್ನು ಜಿ.ಜಿ.ನಾಗರಾಜ ಸಂಪಾದಿಸಿದ್ದಾರೆ.
Comments are closed.