ಬೆಂಗಳೂರು: ‘ಉತ್ತುಣ್ಣುವ ಬಡವರಿಗೆ ಸರ್ಕಾರ 5 ಎಕರೆ ಭೂಮಿ ಕೊಡಬೇಕು’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಒತ್ತಾಯಿಸಿದರು.ಸೆಪ್ಟೆಂಬರ್ ಒಂದರೊಳಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಗಡುವು ವಿಧಿಸಿದರು.
ಎ.ರಾಮಕೃಷ್ಣಯ್ಯ ಮದ್ದೆಗ್ರಾಮ ರಚಿಸಿರುವ, ‘98ನೇ ವಯಸ್ಸಿನಲ್ಲೂ ಕ್ರಿಯಾಶೀಲ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.
‘ಸರ್ಕಾರ ದೇವರಾಜ ಅರಸು ಜನ್ಮಶತಮಾನೋತ್ಸವವನ್ನು ಆಚರಿಸು ತ್ತಿದೆ. ಅವರ ಹೆಸರಿನಲ್ಲಿ ಬಡವರಿಗೆ ಜಮೀನು ನೀಡಬೇಕು. ಇಲ್ಲದಿದ್ದರೆ ಸರ್ಕಾರ ಅರಸು ಹೆಸರು ಹೇಳಿ ಮತ ಗಳಿಸುವ ತಂತ್ರ ಮಾಡುತ್ತಿದೆ ಎಂದು ಭಾವಿಸಬೇಕಾಗುತ್ತದೆ’ ಎಂದರು. ‘ಬಡವರಿಗೆ ತಿಂಗಳಿಗೆ 30 ಕೆ.ಜಿ. ಅಕ್ಕಿ ನೀಡಿದ್ದು ಒಳ್ಳೆಯದೇ. ಆದರೆ, ಇದು ಬಹುಕಾಲ ನಡೆಯುವುದಿಲ್ಲ. ಊಟ ಕೊಟ್ಟ ಸರ್ಕಾರ ಉದ್ಯೋಗ ಕೊಟ್ಟಿಲ್ಲ. ಬದುಕುವ ಸಾಧನವನ್ನೂ ಒದಗಿಸ ದಿದ್ದರೆ ಅವರು ಪ್ರಯೋಜನಕ್ಕೆ ಬಾರ ದಂತೆ ಆಗುತ್ತಾರೆ’ ಎಂದರು.
‘ವಿದ್ಯಾವಂತರು ಪಟ್ಟಣ ಸೇರುತ್ತಿ ದ್ದಾರೆ. ಕೆಲವು ಹಳ್ಳಿಗಳಲ್ಲಿ 25– 30 ಎಕರೆ ಜಮೀನು ಹೊಂದಿರುವವರೂ ಆಳುಗಳು ಸಿಗದ ಕಾರಣ ವ್ಯವಸಾಯ ಮಾಡುತ್ತಿಲ್ಲ. ಬಡವರಿಗೆ ನೀಡಲು ಇಂತಹ ಜಮೀನನ್ನು ಬಳಸಿ ಕೊಳ್ಳಬಹುದು. ಜಮೀನು ಮನೆ ಕಟ್ಟಲು, ನಿವೇಶನ ಮಾಡಿ ಮಾರಾಟ ಮಾಡಲು ಬಳಕೆಯಾಗಬಾರದು. ವ್ಯವಸಾಯ ಮಾಡದಿದ್ದರೆ ಅದನ್ನು ಹಿಂದಕ್ಕೆ ಪಡೆಯಬೇಕು’ ಎಂದು ಸಲಹೆ ನೀಡಿದರು.
ಪುಸ್ತಕ ಬಿಡುಗಡೆ ಮಾಡಿದ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ‘ಗಾಂಧಿಯುಗದ ಮನಸ್ಸು ನಮಗಿಂತ ಉತ್ಸಾಹದಿಂದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡುತ್ತಿರುವುದು ನಮ್ಮ ಪುಣ್ಯ’ ಎಂದರು.
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ ಅಮಿನ್ ಮಟ್ಟು, ‘ಗಾಂಧಿಯನ್ನು ಕೊಂದ ಗೋಡ್ಸೆಗೆ ದೇವಸ್ಥಾನ ಕಟ್ಟುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂದು, ಭಾರತ ಮಾತೆಗೆ ಜೈಕಾರ ಕೂಗುವುದೇ ದೇಶಭಕ್ತಿ ಎಂಬಂತಾಗಿದೆ. ದೇಶಭಕ್ತಿ ಎಂಬುದು ನಿನ್ನೆ ಸುರಿದ ಮಳೆಗೆ ಇವತ್ತು ಹುಟ್ಟಿದ ಮೊಳಕೆ ಅಲ್ಲ, ಅದು ಆಳವಾಗಿ ಬೇರುಬಿಟ್ಟ ಆಲದ ಮರದಂತೆ. ದೇಶ ಪ್ರೇಮಕ್ಕೆ ನಮ್ಮ ಮುಂದಿರುವ ಮಾದರಿ ಎಂದರೆ ದೊರೆಸ್ವಾಮಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ, ‘ನಾನು ಉಪವಿಭಾಗಾಧಿಕಾರಿಯಾಗಿದ್ದಾಗ ಹೆಸರಘಟ್ಟ ಪ್ರದೇಶದಲ್ಲಿ 600 ಎಕರೆ ಜಮೀನಿನ ಒತ್ತುವರಿ ತೆರವು ಮಾಡಿದ್ದೆ. ಅಂದು ಒತ್ತುವರಿ ಮಾಡಿದ್ದ ವ್ಯಕ್ತಿ ಇಂದು ಸಚಿವರಾಗಿದ್ದಾರೆ. ಬಿಡದಿ ಬಳಿ ಗೋಮಾಳ ಜಮೀನಿನ ಒತ್ತುವರಿ ತೆರವಿಗೆ ಮುಂದಾದಾಗ ಹೈಕೋರ್ಟ್ ತಡೆಯಾಜ್ಞೆ ನೀಡಿತು. ಈ ಪ್ರಕರಣದಲ್ಲಿ ಜಮೀನಿನ ಮೌಲ್ಯವನ್ನು ಕಟ್ಟಿಸಿಕೊಳ್ಳಬೇಕು, ಇಲ್ಲದಿದ್ದರೆ ಜಮೀನನ್ನು ಸ್ವಾಧೀನಕ್ಕೆ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೂ ಸರ್ಕಾರ ಕ್ರಮಕೈಗೊಂಡಿಲ್ಲ’ ಎಂದು ದೂರಿದರು.
‘ಹೊಗಳಿಕೆ ಕಿತ್ತುಹಾಕಿ’
‘ನನ್ನನ್ನು ಹೊಗಳುವುದು ಇಷ್ಟವಾಗುವುದಿಲ್ಲ. ನಾನು ಏನು ಮಾಡಿದ್ದೇನೆ ಅದನ್ನು ಮಾತ್ರ ಬರೆಯಿರಿ. ಜನರಿಗೆ ಪ್ರೇರಣೆ ಸಿಗುವುದಾದರೆ ಸಿಗಲಿ ಎಂದು ಹೇಳಿದ್ದೆ. ಪುಸ್ತಕದಲ್ಲಿ ಕೆಲವು ಉತ್ಪ್ರೇಕ್ಷೆಯ ಅಂಶಗಳಿವೆ. ಮುಂದಿನ ಮುದ್ರಣದಲ್ಲಿ ಅವುಗಳನ್ನು ಕಿತ್ತು ಹಾಕಬೇಕು’ ಎಂದು ದೊರೆಸ್ವಾಮಿ ಅವರು ಲೇಖಕರಿಗೆ ಸೂಚಿಸಿದರು.
***
ಜನರು ನನ್ನ ಮೇಲಿಟ್ಟಿರುವ ಅಭಿಮಾನದಿಂದ ಇನ್ನಷ್ಟು ಕೆಲಸ ಮಾಡುವ ಉತ್ಸಾಹ ಬಂದಿದೆ. ಬಡವರ ಪರ ಹೊರಾಟ ಮಾಡಲು ಸಣ್ಣ ಸಂಘಟನೆಯನ್ನು ರೂಪಿಸಲಿದ್ದೇನೆ
-ಎಚ್.ಎಸ್.ದೊರೆಸ್ವಾಮಿ
Comments are closed.