ಕರ್ನಾಟಕ

ಅಂತರ್ಜಲ ಕುಸಿತಕ್ಕೆ ಕಾರಣವಾಗಿರುವ ನೀಲಗಿರಿ ತೆಗೆದುಹಾಕಿ: ಸಚಿವ ರಮೇಶ್‌ಕುಮಾರ್

Pinterest LinkedIn Tumblr

antarಕೋಲಾರ, ಜು.3- ಅಂತರ್ಜಲ ಕುಸಿತಕ್ಕೆ ಕಾರಣವಾಗಿರುವ ನೀಲಗಿರಿಯನ್ನು ತೆಗೆದು ಪರಿಸರ ಸ್ನೇಹಿ ಸಸ್ಯಗಳನ್ನು ನೆಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು. ನಗರ ಹೊರವಲಯದ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ಆವರಣದಲ್ಲಿ ಕೋಟಿ ವೃಕ್ಷ ಆಂದೋಲನದಡಿ ಏರ್ಪಡಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೀಲಗಿರಿ ಮರಗಳಲ್ಲಿ ಹಕ್ಕಿಗಳು ಕೂರಲು ಕೊಂಬೆಗಳಿಲ್ಲ. ಮುಡಿಗಿಟ್ಟುಕೊಳ್ಳಲು ಹೂಗಳಿಲ್ಲ, ತಿನ್ನಲು ಹಣ್ಣುಗಳೂ ಇಲ್ಲ, ದಣಿದು ಬಂದರೆ ನೆರಳನ್ನೂ ಕೊಡುವುದಿಲ್ಲ, ಕನಿಷ್ಟ ಆ ಮರದ ಕೆಳಗೆ ಬೇರೆ ಸಸಿಗಳು ಬೆಳೆಯುವುದೂ ಇಲ್ಲ. ಇದನ್ನು ಯಾರು ತಂದರೋ ಏನೋ ಪರಿಸರವನ್ನು ಸರ್ವನಾಶ ಮಾಡಿಬಿಡುತ್ತಿದೆ ಎಂದು ವಿಷಾದಿಸಿದರು.

ಕೇವಲ ತಮ್ಮ ಲಾಭಕ್ಕಾಗಿ ನೀಲಗಿರಿ ಬೆಳೆಯಲಾಗುತ್ತಿದೆ. ಇದರಿಂದ ನಮ್ಮ ಕೆರೆ-ಕುಂಟೆ-ಬಾವಿಗಳು ಬತ್ತಿ ಹೋಗಿವೆ. ಹಾಗಾಗಿ ಪರಿಸರಕ್ಕೆ ಮಾರಕವಾಗಿರುವ ನೀಲಗಿರಿಯನ್ನು ಎಲ್ಲರೂ ಸೇರಿ ತೆಗೆದುಬಿಡೋಣ. ಸರ್ಕಾರ ಕೂಡ ಈ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು. ಜಲಿ ಗಿಡಗಳಿಂದಲೂ ಯಾವುದೇ ಪ್ರಯೋಜನವಿಲ್ಲ ಎಂದ ಅವರು, ಕೆರೆಗಳನ್ನು ಪುನಃಶ್ಚೇತನಗೊಳಿಸುವ ಉದ್ದೇಶದಿಂದ ನಿಮ್ಮ ನಿವಾಸದ ಸುತ್ತ ಅಂದರೆ 5 ಕಿಮೀ ವ್ಯಾಪ್ತಿಯಲ್ಲಿ ಇರುವ ಜಲಿ ಮರಗಳನ್ನು ತೆರವುಗೊಳಿಸಿ. ಯಾರಿಗೂ ಕೇರ್ ಮಾಡಬೇಡಿ, ಸರ್ಕಾರ ನಿಮ್ಮೊಂದಿಗಿರುತ್ತದೆ. ಶೀಘ್ರವೇ ಕೆಲಸ ಪ್ರಾರಂಭಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್‌ಚಂದ್ರ ಮಾತನಾಡಿ, ಜಿಲ್ಲೆಯಾದ್ಯಂತ ಸುಮಾರು 20 ರಿಂದ 30 ಸಾವಿರ ಹೆಕ್ಟೇರ್ ಭೂಮಿಯಲ್ಲಿ ನೀಲಗಿರಿ ಇದ್ದು, ಇದು ಪರಿಸರ ಮತ್ತು ಅಂತರ್ಜಲದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಜಿಪಂ ಅಧ್ಯಕ್ಷೆ ಗೀತಾ ಆನಂದರೆಡ್ಡಿ, ಉಪಾಧ್ಯಕ್ಷರಾದ ಯಶೋಧಮ್ಮ ಕೆ.ಕೃಷ್ಣಮೂರ್ತಿ, ತಾಪಂ ಅಧ್ಯಕ್ಷರಾದ ಸೂಲೂರು ಎಂ.ಆಂಜಿನಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ರಾಮಲಿಂಗೇಗೌಡ ಮತ್ತಿತರರಿದ್ದರು.

Comments are closed.