ಕೊಪ್ಪಳ: ಪ್ರೀತಿಗಾಗಿ ಮನೆಯವರ ವಿರೋಧ ಕಟ್ಟಿಕೊಂಡ ಮದುವೆಯಾದ ಪತ್ನಿ ಈಗ ಸರ್ಕಾರಿ ನೌಕರಿ ಇಲ್ಲ ಅಂತ ಪತಿಯನ್ನು ಬಿಡಲು ಸಿದ್ಧಳಾಗಿರುವ ವಿಚಿತ್ರ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳದ ಗಂಗಾವತಿಯ ಮದನ್ ಮತ್ತು ನಂದಿನಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರ ಅಂತರ್ಜಾತಿಯ ಮದುವೆಗೆ ಮನೆಯವರ ವಿರೋಧವಿತ್ತು. ಅವರ ವಿರೋಧದ ನಡುವೆಯೂ ಸಹ ಇಬ್ಬರು ಪ್ರೇಮಿಗಳು ಪಂಪಾ ಸರೋವರದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಜೂನ್ 6, 2014 ರಂದು ಗೆಳೆಯರ ಸಮ್ಮುಖದಲ್ಲಿ ವಿವಾಹವಾಗಿದ್ರು. ವಿವಾಹದ ನಂತರ ಕೆಲ ತಿಂಗಳು ಊರು ಬಿಟ್ಟಿದ್ರು. ಕೊಪ್ಪಳ ಎಸ್‍ಪಿ ಕಚೇರಿಗೆ ಹೋಗಿ ರಕ್ಷಣೆಯನ್ನೂ ಕೋರಿದ್ದರು. ಅನಂತರ ಪ್ರೇಮಿಗಳು ಪುನಃ ಗಂಗಾವತಿಗೆ ಬಂದು ಜೀವನ ನಡೆಸಿದ್ರು.
ತವರಿಗೆ ಹೋದವಳು ಮತ್ತೆ ಬರಲಿಲ್ಲ: ಒಂದು ವರ್ಷದ ಹಿಂದೆ ಮದನ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಷ್ಟರಲ್ಲಿಯೇ ಹೆಣ್ಣು ಮಗು ಜನನವಾಯ್ತು. ಮಗುವಿನೊಂದಿಗೆ ಮೂರು ತಿಂಗಳಗಳ ಕಾಲ ತಂದೆ, ತಾಯಿ ಇಬ್ಬರು ಸಂತೋಷವಾಗಿದ್ದರು. ನಂತರ ನಂದಿನಿಯ ತವರಿನವರು ಮಗಳನ್ನು ಮನೆಗೆ ಕಳಿಸಲು ಕೇಳಿಕೊಂಡಿದ್ದರು. ಮದನ್ ಹೆಂಡತಿಯ ಆಸೆಯಂತೆ ತಾಯಿ ಹಾಗೂ ಮಗುವನ್ನು ಕೆಲ ದಿನಗಳ ಕಾಲ ತವರು ಮನೆಗೆ ಕಳುಹಿಸಿ, ಪುನಃ ಬೆಂಗಳೂರಿಗೆ ಹೋಗಿದ್ರು. ಆಗಾಗ ಬಂದು ಹೆಂಡತಿ, ಮಗುವಿನ ಯೋಗಕ್ಷೇಮ ವಿಚಾರಿಸಿಕೊಂಡು ಹೋಗ್ತಿದ್ರು. ಹೆಂಡತಿಯೂ ಸಹ ಫೋನಿನಲ್ಲಿ ಚೆನ್ನಾಗಿಯೇ ಮಾತನಾಡುತ್ತಿದ್ದಳು. ತವರು ಮನೆಯಲ್ಲಿಯೇ ಮೂರು ತಿಂಗಳು ಕಳೆದ ನಂತರ ಪತಿ ಕರೆದುಕೊಂಡು ಬರಲು ಹೋದರೆ ಪ್ರೀತಿಸಿ ಮದುವೆಯಾದ ಪತ್ನಿ ತನ್ನ ಪತಿಯನ್ನೇ ನಿರಾಕರಿಸುತ್ತಿದ್ದಾಳೆ.
ಸರ್ಕಾರಿ ನೌಕರಿಗೆ ಸೇರಿದ್ರೆ ಬರ್ತೀನಿ: ಯಾವುದೇ ಕೌಟುಂಬಿಕ ಕಲಹಗಳು ನಡೆಯದೆ ಪ್ರೀತಿಸಿದ ಜೀವವನ್ನೇ ದೂರ ಮಾಡುತ್ತಿರುವುದರಿಂದ ಮನನೊಂದ ಪತಿಯು ಅಂಗಲಾಚಿ ಬೇಡಿಕೊಂಡು ನಂದಿನಿಯವರ ಮನೆ ಬಾಗಿಲಿಗೆ ಹೋದರೆ ಕುಟುಂಬಸ್ಥರು ಪತ್ನಿ, ಮಗುವನ್ನು ತೋರಿಸುತ್ತಿಲ್ಲ. ಮೊಬೈಲ್ ಮೇಸೇಜ್‍ಗಳಲ್ಲಿ ನಂದಿನಿ ತನ್ನ ಪತಿ ಮದನ್‍ಗೆ ಸರ್ಕಾರಿ ನೌಕರಿಗೆ ಸೇರಿದರೆ ಮಾತ್ರ ನಾನು ನಿನ್ನ ಜೊತೆ ಬರುತ್ತೇನೆ. ಇಲ್ಲದಿದ್ದರೆ ನೀನು ಇನ್ನೊಂದು ಮದುವೆಯಾಗಿ ಸುಖವಾಗಿರು ಎಂದು ತಿಳಿಸಿದ್ದಾಳೆ. ದಿಕ್ಕು ಕಾಣದೆ ನೊಂದ ಪತಿಯು ಪೊಲೀಸ್ ಠಾಣೆಯು ಮೆಟ್ಟಿಲು ಏರಿದರೂ ಸಹ ಪ್ರಯೋಜನವಾಗಿಲ್ಲ. 6 ತಿಂಗಳಿಂದ ಹೆಂಡತಿ ಮಗುವನ್ನು ಕಾಣದೆ ಮದನ್ ಕಂಗಲಾಗಿದ್ದಾರೆ. ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಮಹಿಳಾ ಆಯೋಗಗಳಿವೆ. ಸಮಾಜವೆಲ್ಲಾ ಒಂದಾಗಿ ಬರುತ್ತೆ. ಆದರೆ ಪುರುಷನಿಗೆ ಅನ್ಯಾಯವಾದರೆ ಸಹಾಯಕ್ಕೆ ಯಾರು ಬರ್ತಾರೆ ಅನ್ನೋದು ಮದನ್ ತಂದೆಯ ಮಾತಾಗಿದೆ.
ಅತ್ತ ನಂದಿನಿ ಕುಟುಂಬಸ್ಥರ ಮಾತು ಕೇಳಿ ಗಂಗಾವತಿ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ, ಪತಿಗೆ ನೋಟಿಸ್ ಸಹ ನೀಡಿದ್ದಾಳೆ. ಪತ್ನಿ ಹಾಗೂ ಮಗು ಬೇಕು ಎಂದು ಹಠ ಹಿಡಿದಿರುವ ಮದನ್ ಮುಂದೇನು ಎಂದು ದಿಕ್ಕು ತೋಚದಂತಾಗಿದ್ದಾರೆ.
Comments are closed.