ಬೆಳಗಾವಿ: ಚಿಕ್ಕಮಗಳೂರಿನ ಯುವಕರೊಬ್ಬರನ್ನು ಅಪಹರಿಸಿ 10 ಲಕ್ಷ ರೂ. ಹಣ ಸ್ವೀಕರಿಸಿದ ಆರೋಪ ಕೇಳಿಬಂದಿದ್ದ ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ್ ನೇಣು ಬಿಗಿದು ಆತ್ಮಹತ್ಯೆ ಶರಣಾಗಿದ್ದಾರೆ.
ಬೆಳಗಾವಿಯ ಸವದತ್ತಿ ತಾಲೂಕಿನ ಮುರುಗೋಡ ಠಾಣಾ ವ್ಯಾಪ್ತಿಯಲ್ಲಿರುವ ಮಾವನ ಮನೆಯಲ್ಲಿ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಗಿನ ಜಾವ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಎಲ್‍ಇ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆಯ ನಡೆಯಬೇಕಿದೆ.
ಬೆಳಗಾವಿ ಜಿಲ್ಲೆ ರಾಯಭಾಗ್ ತಾಲೂಕಿನ ಹಂದಿಗುಂದ ಗ್ರಾಮದ ಕಲ್ಲಪ್ಪ 3 ವರ್ಷಗಳ ಹಿಂದೆ ಮುರಗೋಡು ಗ್ರಾಮದ ವಿದ್ಯಾ ಎಂಬುವರನ್ನು ಮದುವೆಯಾದ್ದರು. ದಂಪತಿಗೆ 1 ವರ್ಷದ ಗಂಡು ಮಗುವಿದೆ. ಕಲ್ಲಪ್ಪ ನೇಣಿಗೆ ಶರಣಾದ ವಿಚಾರ ತಿಳಿದು ವಿದ್ಯಾ ಆಘಾತಗೊಂಡಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ.
2006ರಲ್ಲಿ ಸರ್ಕಾರಿ ಶಿಕ್ಷಕನಾಗಿ ಆಯ್ಕೆಯಾಗಿದ್ದ ಕಲ್ಲಪ್ಪ 2008 ರಲ್ಲಿ ಕೆಎಎಸ್ ಪಾಸ್ ಆಗಿ ವಿಧಾನಸೌಧದಲ್ಲಿ ಸೆಕ್ಷನ್ ಆಫೀಸರ್ ಆಗಿ 2 ವರ್ಷ ಕಾರ್ಯನಿರ್ವಹಿಸಿದ್ದರು. 2010ರಲ್ಲಿ ಡಿವೈಎಸ್‍ಪಿಯಾಗಿ ನೇಮಕವಾಗಿದ್ದರು.
ಆಶ್ರಯ ಮನೆ ಭೂಮಿಯಲ್ಲೇ ಕಲ್ಲಪ್ಪ ತಂದೆ-ತಾಯಿ ಇನ್ನೂ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದು, ತಂದೆ ಟ್ಯೂಷನ್ ಮಾಡುತ್ತಾ ಮಗನನ್ನು ಬೆಳೆಸಿದ್ದರು.
Comments are closed.