ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಮತ್ತಿತರ ಕಡೆಗಳಲ್ಲಿ ಸೋಮವಾರವೂ ಧಾರಾಕಾರ ಮಳೆ ಸುರಿದಿದ್ದು, ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಮೂರು ದಿನಗಳಲ್ಲಿ 7 ಟಿಎಂಸಿ ಅಡಿಗಿಂತಲೂ ಹೆಚ್ಚು ನೀರು ಅಣೆಕಟ್ಟೆಗೆ ಹರಿದುಬಂದಿದೆ. ಸೋಮವಾರ ತುಂಗ ಭದ್ರಾ ಜಲಾಶಯದಲ್ಲಿ 10.252 ಟಿಎಂಸಿ ಅಡಿ ನೀರು ಇತ್ತು. ಒಳಹರಿವು 31,617 ಕ್ಯುಸೆಕ್ ಇದೆ.
ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯಕ್ಕೆ ಸೋಮವಾರ 8,681 ಕ್ಯುಸೆಕ್ ನೀರು ಹರಿದುಬಂದಿದೆ. ಕೊಡಗು ಜಿಲ್ಲೆಯಾದ್ಯಂತ ಮತ್ತೆ ಉತ್ತಮ ಮಳೆಯಾಗುತ್ತಿದೆ. ನಿರಂತರ ಮಳೆ ಸುರಿದಿದೆ. ಕಾವೇರಿ ನದಿಯ ಮಟ್ಟವೂ ಏರಿದೆ. ಹಾರಂಗಿ ಜಲಾಶಯದಲ್ಲಿ 2,844.34 ಅಡಿ ನೀರಿನ ಸಂಗ್ರಹವಿದೆ. ಒಳಹರಿವು 2,399 ಕ್ಯುಸೆಕ್ ಇತ್ತು. 24 ಗಂಟೆಯ ಅವಧಿಯಲ್ಲಿ ಎರಡು ಅಡಿ ನೀರು ಹೆಚ್ಚಾಗಿದೆ.
ಹಾಸನದ ಹೇಮಾವತಿ ಜಲಾಶಯದಲ್ಲಿ 2,880 ಅಡಿ ನೀರಿನ ಸಂಗ್ರಹವಿದೆ. ಒಳಹರಿವು 9,171 ಕ್ಯುಸೆಕ್ ಇತ್ತು. ಹೊರಹರಿವು 125 ಕ್ಯುಸೆಕ್ ಇದೆ. 24 ಗಂಟೆಯ ಅವಧಿಯಲ್ಲಿ 2 ಅಡಿ ನೀರು ಹೆಚ್ಚಳವಾಗಿದೆ. ಮೈಸೂರು ಜಿಲ್ಲೆ ಕಬಿನಿ ಜಲಾಶಯದಲ್ಲಿ 2,262.32 ಅಡಿ ನೀರಿನ ಸಂಗ್ರಹವಿದೆ. ಒಳಹರಿವು 4 ಸಾವಿರ ಕ್ಯುಸೆಕ್ ಇತ್ತು. ಹೊರಹರಿವು 2 ಸಾವಿರ ಕ್ಯುಸೆಕ್ ಇದೆ. 24 ಗಂಟೆಯಲ್ಲಿ ಅರ್ಧ ಅಡಿ ನೀರು ಏರಿಕೆಯಾಗಿದೆ.
ಮಂಡ್ಯದ ಕೆಆರ್‌ಎಸ್‌ನಲ್ಲಿ 86.35 ಅಡಿ ನೀರಿನ ಸಂಗ್ರಹವಿದೆ. ಒಳಹರಿವು 10,918 ಕ್ಯುಸೆಕ್ ಇದೆ. ಹೊರಹರಿವು 2,580 ಕ್ಯುಸೆಕ್ ಇದೆ. 24 ಗಂಟೆ ಅವಧಿಯಲ್ಲಿ 1.35 ಅಡಿ ನೀರು ಹೆಚ್ಚಾಗಿದೆ.
ಸಾಧಾರಣ ಮಳೆ: ಬಳ್ಳಾರಿ, ವಿಜಯಪುರ, ಗದಗ ಜಿಲ್ಲೆಯಲ್ಲಿ ಸೋಮವಾರ ತುಂತುರು, ಹಾವೇರಿ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ.
ಧಾರವಾಡ ನಗರದಲ್ಲಿ ಮಧ್ಯಾಹ್ನ ಎರಡು ಬೃಹತ್ ಮರಗಳು ಧರೆಗುರುಳಿದ್ದರಿಂದ ಸಂಜೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಹುಬ್ಬಳ್ಳಿಯಲ್ಲಿ ತುಂತುರು ಮಳೆಯಾಗಿದೆ.
Comments are closed.