ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಕಾರ್ಯ ವೈಖರಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ತಮ್ಮ ಕೆಳಹಂತದ ಅಧಿಕಾರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅತ್ಯುನ್ನತ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೊಬ್ಬರಿಗೆ ಅವಕಾಶ ಕಲ್ಪಿಸಬೇಕೆಂಬ ಆಕ್ರೋಶದ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಕಿರುಕುಳ ತಾಳಲಾರದೆ ಇಲಾಖೆಯಿಂದಲೇ ದೂರವಾಗಿದ್ದಾರೆ. ಇವರನ್ನು ರಕ್ಷಣೆ ಮಾಡಬೇಕಾದ ಓಂಪ್ರಕಾಶ್ ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎಂಬ ಮಾತುಗಳು ಗೃಹ ಇಲಾಖೆಯಲ್ಲೇ ರಿಂಗಣಿಸುತ್ತಿವೆ.
ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ, ನಾಲ್ಕು ದಿನಗಳ ಹಿಂದೆ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ, ನಿನ್ನೆಯಷ್ಟೇ ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೃಹ ಇಲಾಖೆಯಲ್ಲಿ ಯಾವುದೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರ ಮಾಡಿದೆ. ಅತ್ಯುನ್ನತ ಸ್ಥಾನದಲ್ಲಿರುವ ಓಂಪ್ರಕಾಶ್ಗೆ ತಮ್ಮ ಕೈ ಕೆಳಗಡೆ ಏನು ನಡೆಯುತ್ತದೆ ಎಂಬ ಪರಿಜ್ಞಾನವೂ ಇಲ್ಲದಂತಾಗಿದೆ. ಒಂದು ವೇಳೆ ಇಲಾಖೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರೆ ಇಂದು ಇಂತಹ ಅವಘಡ ನಡೆಯುತ್ತಿರಲಿಲ್ಲ ಎಂಬುದು ಅನೇಕರ ಅಳಲು. ಅನಿರೀಕ್ಷಿತವಾಗಿ ಡಿಜಿ ಹುದ್ದೆ ಅಲಂಕರಿಸಿದ ಅವರು ಕೇವಲ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳು ಮತ್ತು ಗೃಹಸಚಿವರನ್ನು ತೃಪ್ತಿಪಡಿಸುವುದಷ್ಟೇ ಅವರ ಕಾಯಕವಾಗಿದೆ.
ಕಾನೂನು ಸುವ್ಯವಸ್ಥೆ , ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು, ಕೋಮುಗಲಭೆ, ಮಕ್ಕಳ ಮೇಲೆ ಹಲ್ಲೆ ,ಕಳ್ಳತನ, ದರೋಡೆ, ಕೊಲೆ, ಸರ ಅಪಹರಣ, ಮಟ್ಕಾ ದಂಧೆ ಸೇರಿದಂತೆ ಯವುದರ ಬಗ್ಗೆಯೂ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳಲಿಲ್ಲ. ತಮ್ಮ ಇಲಾಖೆಯನ್ನು ಈವರೆಗೂ ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ ಎಂದು ಹೆಸರು ಬಹಿರಂಗಪಡಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಮಾನ್ಯವಾಗಿ ಡಿಜಿ ಸ್ಥಾನದಲ್ಲಿರುವ ಅಧಿಕಾರಿಗಳು ಪ್ರತಿ ತಿಂಗಳು ವಲಯ ಮಟ್ಟದಲ್ಲಿ ಸಭೆ ನಡೆಸಬೇಕು, ಕೆಳಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಆದರೆ ಇದ್ಯಾವುದನ್ನೂ ಮಾಡದ ಓಂಪ್ರಕಾಶ್ ಅವರು ಬೆಂಗಳೂರು ಬಿಟ್ಟು ಜಾಗ ಕದಲಿಸಿಯೇ ಇಲ್ಲ.
ಡಿಜಿ ಆಗಿರುವ ಓಂಪ್ರಕಾಶ್ಗೆ ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ, ಇದೇ ರೀತಿಎ ಷ್ಟು ವಲಯ ಮಟ್ಟ ರಚನೆ ಮಾಡಲಾಗಿದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ. ಕೇವಲ ಸಿಕ್ಕಿರುವ ಅಧಿಕಾರವನ್ನು ಅನುಭವಿಸುವುದರಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಹಿಂದಿನ ಡಿಜಿ ಅವರ ಕಾರ್ಯಶೈಲಿಗಳನ್ನು ಅಧ್ಯಯನ ಮಾಡಿ ಆಡಳಿತ ನಡೆಸಿದ್ದರೆ ಇಲಾಖೆಗೆ ಇಂಥ ಕೆಟ್ಟ ಹೆಸರು ಬರುತ್ತಿರಲಿಲ್ಲ. ಇದ್ಯಾವುದನ್ನೂ ಮಾಡದ ಸಾಹೇಬರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ಗೆ ಸಲ್ಯೂಟ್ ಹೊಡೆದು ಕುರ್ಚಿ ಭದ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ದೂರುತ್ತಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಇನ್ನು ಓಂಪ್ರಕಾಶ್ ಅವರ ಆಡಳಿತ ಶೈಲಿಗೆ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರನ್ನೇ ರಕ್ಷಣೆ ಮಾಡದ ಇವರು ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿದ್ದಾರೆಯೇ ಎಂದು ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇಲಾಖೆಯ ಹೊಣೆ ಹೊತ್ತಿರುವ ಓಂಪ್ರಕಾಶ್ ಅವರಿಗೆ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಇಂಥವರು ಸೇವೆಯಲ್ಲಿ ಮುಂದುವರೆಯುವ ಬದಲು ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂಬ ಆಕ್ರೋಶದ ದನಿ ಎಲ್ಲೆಡೆ ವ್ಯಕ್ತವಾಗಿದೆ.
Comments are closed.