ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಇಬ್ಬರು ಡಿವೈಎಸ್‍ಪಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಬ್ಬ ಮಹಿಳಾ ಡಿವೈಎಸ್‍ಪಿ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮೊದಲು ಪೊಲೀಸ್ ಸಿಬ್ಬಂದಿಗಳೇ ಪ್ರತಿಭಟನೆಗೆ ಮುಂದಾಗಿದ್ದು, ಮುಖ್ಯಮಂತ್ರಿ ಅವರ ಅಸಮಾಧಾನಕ್ಕೆ ಕಾರಣವಾಗಿದ್ದು, ಇಂದು ಬೆಳಗ್ಗೆ ಡಿಜಿಪಿ ಅವರನ್ನು ಈ ಕುರಿತು ಪ್ರಶ್ನಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮಡಿಕೇರಿಯಲ್ಲಿ ಡಿವೈಎಸ್‍ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ನೀಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಡಿಜಿಪಿ ಓಂ ಪ್ರಕಾಶ್ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಓಂ ಪ್ರಕಾಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಕೆಲಸ ಮಾಡುವ ಸಾಮಥ್ರ್ಯ ಇಲ್ಲದೇ ಇದ್ದರೆ ರಾಜೀನಾಮೆ ನೀಡಿ ಹೋಗಿ, ನಿಮ್ಮ ಅಸಮರ್ಥತೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಖಾರವಾಗಿ ಗುಡುಗಿದ್ದಾರೆ.
ಹಿರಿಯ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದಂತಾಗಿದೆ. ಸಹಜವಾಗಿ ಕೆಲವರಿಗೆ ಕಿರುಕುಳವಾಗುತ್ತಿದೆ, ಇನ್ನು ಕೆಲವರಿಗೆ ಅಗತ್ಯಕ್ಕಿಂತಲೂ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಯಾವುದೇ ಗಂಭೀರ ಪ್ರಕರಣಗಳು ನಡೆದಾಗ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಹೋಗುತ್ತಿಲ್ಲ. ವಿವೇಚನೆ ಇಲ್ಲದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾನೂನು ಸುವ್ಯವಸ್ಥೆ ತಹಬದಿಯಲ್ಲಿದ್ದರೂ ಅಧಿಕಾರಿಗಳ ವಲಯದಿಂದ ಕೇಳಿ ಬರುತ್ತಿರುವ ಅಸಮಾಧಾನಗಳು ವಿಪರೀತವಾಗಿವೆ. ಇವುಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿ ಯಾವ ಕ್ರಮ ಕೈಗೊಂಡಿದ್ದೀರಿ? ಗಣಪತಿ ಅವರು ಮಾಧ್ಯಮವೊಂದಕ್ಕೆ ಹೋಗಿ ಬಹಿರಂಗವಾಗಿ ಹೇಳಿಕೆ ನೀಡುವಷ್ಟು ಪರಿಸ್ಥಿತಿ ಹದಗೆಟ್ಟಿದೆ. ಕೆಳ ಹಂತದಲ್ಲೇ ಸಮಸ್ಯೆಗಳನ್ನು ಪರಿಹರಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸುಮಾರು 15 ನಿಮಿಷ ಗೃಹ ಸಚಿವರ ಸಮ್ಮುಖದಲ್ಲೇ ಮುಖ್ಯಮಂತ್ರಿ ಡಿಜಿಪಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Comments are closed.