ಕರ್ನಾಟಕ

ಅತೃಪ್ತಿ ತೌಡು – ಬಿಎಸ್‌ವೈ ದೆಹಲಿ ದೌಡು

Pinterest LinkedIn Tumblr

Lotus1-709x400ಬೆಂಗಳೂರು, ಜು. ೮- ಮಳೆ ನಿಂತರೂ ಹನಿ ನಿಲ್ಲಲಿಲ್ಲ ಎಂಬಂತೆ ರಾಜ್ಯ ಬಿಜೆಪಿಯ ಆಂತರಿಕ ಕಲಹ ಇನ್ನು ಮುಗಿದಿಲ್ಲ. ಮುಖಂಡರ ದಹಲಿಯಾತ್ರೆಗಳು ನಿಂತಿಲ್ಲ. ನಿನ್ನೆ ಪಕ್ಷದ ಹೈಕಮಾಂಡ್ ಕೋರ್ ಕಮಿಟಿಯನ್ನು ಪುನಾರಚಿಸಿದ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ.

ಪದಾಧಿಕಾರಿಗಳ ನೇಮಕ ನಂತರ ಪಕ್ಷದಲ್ಲಿ ಉಂಟಾಗಿರುವ ಅತೃಪ್ತಿ, ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದ್ದು, ಪಕ್ಷದ ವರಿಷ್ಠರು ಕೋರ್ ಕಮಿಟಿಯನ್ನು ಹೊಸದಾಗಿ ರಚಿಸಿದ ನಂತರ ಪಕ್ಷದಲ್ಲಿ ಅಸಮಾಧಾನ, ಅತೃಪ್ತಿಗಳು ಮತ್ತೆ ಹೊಗೆಯಾಡುತ್ತಲೇ ಇದೆ.

ಪಕ್ಷದ ವರಿಷ್ಠರು ಹೊಸದಾಗಿ ರಚಿಸಿರುವ ರಾಜ್ಯ ಬಿಜೆಪಿಯ ಕೋರ್ ಕಮಿಟಿಯಲ್ಲಿ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ್ದ ಮುಖಂಡರುಗಳಿಗೆ ಮಣೆ ಹಾಕಲಾಗಿದೆ. ಯಡಿಯೂರಪ್ಪನವರು ಸೂಚಿಸಿದ್ದ ಹಲವು ಹೆಸರುಗಳು ಕೋರ್ ಕಮಿಟಿಯಿಂದ ಕಾಣೆಯಾಗಿವೆ. ಇದು ಯಡಿಯೂರಪ್ಪನವರ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಕೋರ್ ಕಮಿಟಿಯಲ್ಲಿ ಯಡಿಯೂರಪ್ಪನವರ ಬಗ್ಗೆ ಮುನಿಸಿಕೊಂಡಿರುವ ನಾಯಕರಿಗೆ ಆದ್ಯತೆ ನೀಡುವ ಮೂಲಕ ಒಂದು ರೀತಿಯಲ್ಲಿ ಯಡಿಯೂರಪ್ಪನವರನ್ನು ಕಟ್ಟಿ ಹಾಕುವ ಪ್ರಯತ್ನವನ್ನು ಮಾಡಲಾಗಿದೆ ಎಂದೇ ಹೇಳಲಾಗುತ್ತಿದೆ.

ಕೋರ್ ಕಮಿಟಿಯಲ್ಲಿ ಯಡಿಯೂರಪ್ಪನವರ ಮಾತುಗಳಿಗೆ ಹೆಚ್ಚಿನ ಬೆಂಬಲ ಸಿಗಬಾರದು. ಅವರಿಗೆ ಒಂದು ರೀತಿಯಲ್ಲಿ ಕಡಿವಾಣ ಹಾಕಬೇಕೆಂದೇ ಯಡಿಯೂರಪ್ಪನವರ ಆಪ್ತ ವಲಯದಲ್ಲಿರುವ ಪ್ರಭಾವಿ ಮುಖಂಡರನ್ನು ಕೋರ್ ಕಮಿಟಿಯಿಂದ ದೂರವಿಡಲಾಗಿದೆ ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತದೋ ಹೇಳಲು ಬಾರದು.

ಪಕ್ಷದ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಅಸಮಾಧಾನಗೊಂಡಿದ್ದ ವಿಧಾನಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ, ಪಕ್ಷದ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸೇರಿದಂತೆ ಹಲವು ಮುಖಂಡರು ಹೈಕಮಾಂಡ್‌ಗೆ ದೂರು ನೀಡಿ ಯಡಿಯೂರಪ್ಪನವರ ಕಾರ್ಯವೈಖರಿ ವಿರುದ್ದ ಅಸಮಾಧಾನ ಹೊರ ಹಾಕಿದ್ದರು.

ಈ ಬೆಳವಣಿಗೆ ನಂತರ ಪಕ್ಷದ ರಾಷ್ಟ್ರಮಟ್ಟದಲ್ಲಿ ಪ್ರಭಾವ ಹೊಂದಿರುವ ರಾಜ್ಯದ ಆರ್‌ಎಸ್‌ಎಸ್ ನಾಯಕರು ತಮ್ಮದೇ ಆದ ತಂತ್ರ ಬಳಸಿ ಯಡಿಯೂರಪ್ಪನವರ ಬೆಂಬಲಿಗರಿಗೆ ಕೋರ್ ಕಮಿಟಿಯಲ್ಲಿ ಸ್ಥಾನ ಸಿಗದಂತೆ ನೋಡಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಕೆಲ ನಾಯಕರು ಪಕ್ಷದ ಹಿತವನ್ನು ಬಿಟ್ಟು ಯಾವುದೋ ಕಾರಣಕ್ಕೆ ಕೆಲ ಮುಖಂಡರನ್ನು ಗುರಿಯಾಗಿಸಿ ನಡೆಸುತ್ತಿರುವ ಈ ರಾಜಕಾರಣದಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಂದೆ ಪಕ್ಷ ಅಧಿಕಾರಕ್ಕೆ ಬರಲು ಈ ನಾಯಕರುಗಳ ನಡವಳಿಕೆಗಳು ಎಲ್ಲಿ ಅಡ್ಡಿಯಾಗುತ್ತದೆಯೋ ಎಂಬ ಆತಂಕ ಪಕ್ಷದ ನಿಷ್ಠಾವಂತ ಕಾರ್ಯಕರ್ತರದ್ದಾಗಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ನಿನ್ನೆ ರಾತ್ರಿ ದೆಹಲಿಗೆ ತೆರಳಿದ್ದು, ಪಕ್ಷದ ನಾಯಕರರನ್ನು ಭೇಟಿ ಮಾಡಿ ಎಲ್ಲವನ್ನೂ ಅವರ ಗಮನಕ್ಕೆ ತರಲಿದ್ದಾರೆ ಎಂದು ಮೂಲಗಳು ಹೇಳಿವೆ.

ದೆಹಲಿಯಲ್ಲಿ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪನವರು ತೆರಳಿದ್ದಾರೆ. ಕೋರ್ ಕಮಿಟಿಯ ನೇಮಕಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಅಲ್ಲ ಎಂದೂ ಅವರ ಆಪ್ತ ವಲಯಗಳು ಸ್ಪಷ್ಟಪಡಿಸಿದರೂ ದೆಹಲಿಯಲ್ಲಿರುವ ಯಡಿಯೂರಪ್ಪನವರು ವರಿಷ್ಠರನ್ನು ಭೇಟಿ ಮಾಡಿ ಕೋರ್ ಕಮಿಟಿ ನೇಮಕಕ್ಕೆ ಸಂಬಂಧಿಸಿದಂತೆ ಆಗಿರುವ ಕೆಲ ಲೋಪಗಳನ್ನು ವರಿಷ್ಠರ ಗಮನಕ್ಕೆ ತರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಏನೇ ಆಗಲಿ ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Comments are closed.