ಕರ್ನಾಟಕ

`ಪ್ರತಿ ಬಾರಿಯೂ ಬಿಜೆಪಿ ಸಾವಿನ ರಾಜಕಾರಣ’

Pinterest LinkedIn Tumblr

Parameshwar1clrಬೆಂಗಳೂರು, ಜು. ೧೪- ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಪ್ರತಿ ಬಾರಿಯೂ ಸಾವಿನ ಜೊತೆ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸಭಾನಾಯಕರೂ ಆಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದು ವಿಧಾನ ಪರಿಷತ್‌ನಲ್ಲಿ ಆರೋಪಿಸಿದ್ದಾರೆ.

ಗಂಭೀರವಾದ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕಾಗಿದೆ. ಇದಕ್ಕೆ ಪ್ರತಿಪಕ್ಷಗಳು ಸಹಕಾರ ನೀಡಬೇಕು ಅದನ್ನು ಬಿಟ್ಟು ಸಾವಿನ ವಿಷಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಸರಿಯಲ್ಲ ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ತಿರುಗೇಟು ನೀಡಿದರು.

ಬೆಳಿಗ್ಗೆ ಸದನ ಆರಂಭವಾಗಿ ಮುಂದೂಡಿದ ಬಳಿಕ ಮತ್ತೆ ಸದನ ಸಮಾವೇಶಗೊಂಡಾಗ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸದನದ ಬಾವಿಗಿಳಿದು ಧರಣಿ ಮುಂದುವರಿಸಿ ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು ಅಲ್ಲಿಯತನಕ ಹೋರಾಟ ಮುಂದುವರಿಸಲಾಗುವುದು ಎಂದು ಹೇಳುತ್ತಿದ್ದಂತೆ ಮಧ್ಯ ಪ್ರವೇಶಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಅನುಪಮಾ ಶೆಣೈ, ಕಲ್ಲಪ್ಪ ಅಂಡಿಬಾಗ್, ಎಂ.ಕೆ. ಗಣಪತಿ ಸೇರಿದಂತೆ ನಾನಾ ವಿಷಯಗಳ ಕುರಿತು ಸರ್ಕಾರ ಉತ್ತರ ನೀಡಬೇಕಾಗಿದೆ. ಸಭಾಪತಿಗಳು ಅವಕಾಶ ಮಾಡಿಕೊಡಿ ಎಂದರು.

ಇದಕ್ಕೆ ಈಶ್ವರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆರಳಿದ ಪರಮೇಶ್ವರ್, ಪ್ರತಿಪಕ್ಷಗಳಿಗೆ ಉತ್ತರ ಬೇಕಾಗಿಲ್ಲ. ಪ್ರತಿ ಬಾರಿಯೂ ಸಾವಿನ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ. ಅಲ್ಲದೆ ಈಗ ನ್ಯಾಯಾಂಗ ತನಿಖೆಗೂ ಒಪ್ಪಿಸಿದೆ. ಹೀಗಿದ್ದರೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿರುವುದು ಸರಿಯಲ್ಲ. ನೀವು ಹೇಳಿದ ಹಾಗೆ ಕೇಳಲು ಸಿದ್ಧರಿಲ್ಲ ಎಂದರು.

ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ ಇದೊಂದು ಭಂಡ ಸರ್ಕಾರ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್ ಕೈವಾಡವಿಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಜಾರ್ಜ್ ಅವರದು ತಪ್ಪೇನು ಇಲ್ಲ ಎಂದು ಹೇಳುತ್ತಾರೆ. ಇವರೇನು ನ್ಯಾಯಾಧೀಶರ ಎಂದು ಪ್ರಶ್ನಿಸಿದರು.

ಇದರಿಂದಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ ನಡೆಯಿತು.

Comments are closed.