ಗೂಗಲ್ ನಿಮ್ಮ ಸರ್ಚ್‌ಗಳನ್ನು ಲೆಕ್ಕಕ್ಕೆ ಇಡುತ್ತದೆ ಎಂಬುದು ನಿಮಗೆ ಗೊತ್ತೆ ನೀವೇನೇ ಹುಡುಕಿದರೂ ಅದು ಒಂದೊಂದಾಗಿ ಗೂಗಲ್ ಸರ್ಚ್ ಹಿಸ್ಟರಿಯಲ್ಲಿ ಸೇರುತ್ತಾ ಹೋಗುತ್ತದೆ. ಅದನ್ನು ಡಿಲೀಟ್ ಮಾಡಬಹುದು ಎಂಬುದು ಅನೇಕರಿಗೆ ಗೊತ್ತಿರುವುದಿಲ್ಲ. ನಿಮಗೇನಾದರೂ ಗೊತ್ತೆ?
ಎಲ್ಲ ಸಾಮಾಜಿಕ ಜಾಲತಾಣಗಳು, ಟೆಕ್ ಕಂಪನಿಗಳು ತಮ್ಮ ಬಳಕೆದಾರರ ಮಾಹಿತಿಯನ್ನು ತಮಗೆ ಬೇಕಾದ ಬಳಸುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮಾರುಕಟ್ಟೆಗೆ ಬೇಕಾದ ಟ್ರೆಂಡನ್ನು ಅರ್ಥಮಾಡಿಕೊಳ್ಳುವುದಕ್ಕೆ, ಗ್ರಾಹಕರ ಇಷ್ಟಾನಿಷ್ಟಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಮಾರುಕಟ್ಟೆಯನ್ನು ಸೃಷ್ಟಿ ಮಾಡುವುದಕ್ಕೆ ಈ ಟೆಕ್ ಕಂಪನಿಗಳು ತಮ್ಮ ಗ್ರಾಹಕರು ಜಾಲತಾಣಗಳ ಬಳಕೆಯ ಮೇಲೆ ಕಣ್ಣಿಡುತ್ತಾರೆ.
ಗೂಗಲ್ ಇಂದು ಎಲ್ಲ ರೀತಿಯಲ್ಲೂ ನಮ್ಮನ್ನು ವ್ಯಾಪಿಸಿಕೊಂಡಿಸಿದೆ. ಜಿಮೇಲ್, ಆಂಡ್ರಾಯ್ಡ್ ಸೇರಿದಂತೆ ಗೂಗಲ್ನ ವಿವಿಧ ಸೇವೆಗಳನ್ನು ಬಳಸುತ್ತಿದ್ದೇವೆ. ಗೂಗಲ್ ಎಂಬ ಸರ್ಚ್ ಎಂಜಿನ್ನೇ ಅಗಾಧವಾಗಿ ಬಳಕೆಯಾಗುತ್ತದೆ.
ನಿಮಗೆ ಗೊತ್ತೆ, ಇನ್ಯಾರಿಗೂ ಗೊತ್ತಾಗುವುದಿಲ್ಲ ಎಂದು ಇಲ್ಲಿ ನೀವು ಏನೇನೊ ಹುಡುಕುತ್ತೀರಲ್ಲ ಅದು ಒಂದೆಡೆ ಸಂಗ್ರಹವಾಗುತ್ತಿರುತ್ತದೆ! ಹೌದು ಗೂಗಲ್ ನೀವು ಹೊಟೆಲ್ ವಿಳಾಸ, ರೂಟ್ ಮ್ಯಾಪ್, ಇಷ್ಟದ ತಿನಿಸು, ಅಡುಗೆ ಮಾಡುವ ವಿಧಾನ, ಪೋಲಿ ಚಿತ್ರ, ಸುಂದರ ಹುಡುಗಿ ಫೋಟೋ, ಸಿನಿಮಾ ಹೀಗೆ ತರಹೇವಾರಿ ವಿಷಯಗಳನ್ನು ಹುಡುಕುತ್ತೀರಿ. ಅದೆಲ್ಲವೂ ಗೂಗಲ್ ಹಿಸ್ಟರಿಯಲ್ಲಿರುತ್ತದೆ.
ಇದನ್ನು ಡಿಲೀಟ್ ಮಾಡದೇ ಹೋದರೆ ಎಲ್ಲಾದರೂ ಇದು ಸೋರಿಕೆಯಾಗಿ, ದುರುಪಯೋಗವಾಗುವ ಸಾಧ್ಯತೆ ಇರುತ್ತದೆ ಎಂಬುದು ನಿಮಗೆ ಗೊತ್ತಿರಲಿ. ಅದಕ್ಕಾಗಿ ನೀವೇನು ಮಾಡಬೇಕು? ಗೂಗಲ್ನ ಮೈ ಆಕ್ಟಿವಿಟಿ (https://myactivity.google.com) ಗೆ ಹೋಗಿ ಅಲ್ಲಿ ನೀವೇನೇನು ಹುಡುಕಿದ್ದೀರಿ ಎಂಬುದನ್ನು ನೋಡಬಹುದು. ಪ್ರತಿ ದಿನ, ಪ್ರತಿ ಕ್ಷಣ ಏನೇನು ವಿಷಯವನ್ನು ಗೂಗಲ್’ನಿಂದ ಹೆಕ್ಕಿದ್ದೀರಿ ಎಂಬುದು ಅಲ್ಲಿ ದಾಖಲಾಗಿರುತ್ತದೆ.
ಯಾವ ದಿನ, ಏನೇನು ಹುಡುಕಿದ್ದೀರಿ ಎಂಬುದನ್ನು ಹುಡುಕುವ ಅವಕಾಶವೂ ಇಲ್ಲಿದೆ! ಹೀಗೆ ಸಿಕ್ಕ ಮಾಹಿತಿ ಇನ್ನೊಬ್ಬರ ಕಣ್ಣಿಗೆ ಬಿದ್ದರೆ ನಿಮಗೆ ಮುಜುಗರವಾಗಬಹುದು, ನಿಮ್ಮ ಖಾಸಗಿತನಕ್ಕೆ ಧಕ್ಕೆಯಾಗಬಹುದು ಎನಿಸಿದರೆ ನೀವು ಈ ಹಿಸ್ಟರಿಯನ್ನು ಡಿಲೀಟ್ ಮಾಡಬಹುದು. ಅದಕ್ಕೆ ಅವಕಾಶ ಗೂಗಲ್ ಮಾಡಿಕೊಟ್ಟಿದೆ.
ಅಷ್ಟೇ ಅಲ್ಲ ಮುಂದೆಯೂ ನಿಮ್ಮ ಬಳಕೆಯ ಮೇಲೆ ಗೂಗಲ್ ನಿಗಾ ಇಡದಂತೆಯೂ ಮಾಡಬಹುದು. ಅದಕ್ಕಾಗಿ ಮೈ ಅಕೌಂಟ್’ಗೆ ಹೋಗಿ ಅಲ್ಲಿ ಅಕ್ಟಿವಿಟಿ ಕಂಟ್ರೋಲ್ಸ್ (https://myaccount.google.com/activitycontrols) ನಲ್ಲಿ ನಿಮ್ಮ ಹುಡುಕಾಟ, ಯೂಟ್ಯೂಬ್ ವೀಕ್ಷಣೆ, ಲೊಕೇಷನ್ ಮಾಹಿತಿಯನ್ನು ಸಂಗ್ರಹಿಸಿಡದಂತೆ ನಿರ್ಬಂಧಿಸಿದರೆ ಸಾಕು.
Comments are closed.