ಬೆಂಗಳೂರು: ವೀರಶೈವ ಸಮಾಜಕ್ಕೆ ರಾಜಕೀಯ ಸಮೀಕರಣದ ಸಾಮರ್ಥ್ಯವಿದ್ದರೂ, ನಮ್ಮಲ್ಲಿರುವ ಅಳುಕಿನಿಂದಾಗಿ ನಿರಂತರ ಅನ್ಯಾಯಕ್ಕೆ ಒಳಗಾಗುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಗುರುವಾರ ಹಮ್ಮಿಕೊಂಡಿದ್ದ ವಿಜಯಾನಂದ ಎಸ್. ಕಾಶಪ್ಪನವರ ಅವರ
ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಈ ಹಿಂದೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿ ಸುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದಂತೆಯೇ ಒಕ್ಕಲಿಗ ಸಮುದಾಯ ಒಗ್ಗಟ್ಟಾಗಿ ಸದಾನಂದ ಗೌಡರ ಬೆಂಬಲಕ್ಕೆ ನಿಂತಿತು. ಆದರೆ, ಈಚೆಗೆ ಜಿ.ಎಂ. ಸಿದ್ದೇಶ್ವರ ಅವರನ್ನು ಸಂಪುಟದಿಂದ ಕೈಬಿಟ್ಟಾಗ ಲಿಂಗಾಯತ ಸಮುದಾಯದ ಯಾರೊಬ್ಬರೂ ದನಿ ಎತ್ತಲಿಲ್ಲ. ಇಂತಹ
ಭಯ-ಅಳುಕಿನಿಂದಾಗಿ ವೀರಶೈವ ಸಮಾಜ ಸಾಮರ್ಥ್ಯವಿದ್ದರೂ ಅನ್ಯಾಯಕ್ಕೆ ಒಳಗಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಗಂತ, ಬೇರೆ ಸಮುದಾಯಗಳ ಬಗ್ಗೆ ನಾನು ಹೀಗಳೆಯುತ್ತಿಲ್ಲ. ನಮ್ಮ ಸಮಾಜಕ್ಕೆ ಸಿಗಬೇಕಾದ ಸ್ಥಾನಮಾನಗಳನ್ನು ಕೇಳಬೇಕು. ಅನ್ಯಾಯವಾದಾಗ ಅದನ್ನು ಪ್ರಶ್ನಿಸುವಂತಾಗಬೇಕು ಎಂದ ಅವರು, “ಹಳೆಯ ಕಾಲದ ಮಂದಿ “ಚಾವಿ’ (ಕೀಲಿ ಕೈ) ತಮ್ಮ ಬಳಿಯೇ ಇಟ್ಟುಕೊಂಡು ಕುಳಿತಿದ್ದಾರೆ. ಇದರಿಂದ ಸಮಾಜದ ಯುವ ಸಮುದಾಯ ಮುಂದೆ ಬರಲು ಸಾಧ್ಯವಾಗುತ್ತಿಲ್ಲ’ ಎಂದು ಸೂಚ್ಯವಾಗಿ ಹೇಳಿದರು.
ಬೆಂಗಳೂರಿಗೆ ಹತ್ತಿರವಿದ್ದವರೇ ಅಧಿಕಾರ ನಡೆಸುವಂತಾಗಿದೆ. ಉತ್ತರ ಕರ್ನಾಟಕದಿಂದ ಬಂದವರು ಈಗಲೂ ಇಲ್ಲಿ ಅಲ್ಪಸಂಖ್ಯಾತರೇ ಆಗಿದ್ದಾರೆ. ನಮಗೆ ಅಸ್ತಿತ್ವ ಇಲ್ಲದಂತಾಗಿದೆ. ಯುವಕರಿಗೆ ಸಮುದಾಯದ ರಕ್ಷಣೆ ಸಿಗಬೇಕು ಎಂದು ಅವರು ತಿಳಿಸಿದರು. ಮಠಗಳ ಮೇಲೆ ನಿಯಂತ್ರಣ ಸಲ್ಲದು:
ಇದೇ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ದೇವಸ್ಥಾನಗಳ ಮೇಲೆ ಸರ್ಕಾರ ನಿಯಂತ್ರಣ ಹೇರಬಾರದು. ಯಾರಿಗೂ ಇಲ್ಲದ ನಿಯಂತ್ರಣ
ಮಠಗಳಿಗೆ ಯಾಕೆ ಎಂದು ಕೇಳಿದ ಬಸನಗೌಡ ಪಾಟೀಲ ಯತ್ನಾಳ್, ದೇವಸ್ಥಾನಗಳು-ಮಠಗಳನ್ನು ಸರ್ಕಾರದಿಂದ ಮುಕ್ತಗೊಳಿಸಿ ಎಂದು
ವೇದಿಕೆಯಲ್ಲಿದ್ದ ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ ಅವರನ್ನು ಒತ್ತಾಯಿಸಿದರು.
ಸಚಿವ ರುದ್ರಪ್ಪ ಲಮಾಣಿ ಮಾತನಾಡಿದರು. ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ
ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗೌರಮ್ಮ ಕಾಶಪ್ಪನವರ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ವಿಜಯಾನಂದ ಎಸ್. ಕಾಶಪ್ಪನವರ,
ಕಿರುತೆರೆ ನಟ ಎಚ್.ಎಸ್. ನಾಗ್‌ಕಿರಣ್, ಪ್ರಿಯಾಂಕ ಕಾಶಪ್ಪನವರ ಮತ್ತಿತರರು ಉಪಸ್ಥಿತರಿದ್ದರು. ವೇದಿಕೆ ರಾಜ್ಯ ಘಟಕದ ಅಧ್ಯಕ್ಷ
ಪ್ರಶಾಂತ್ ಕಲ್ಲೂರು ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ, ವೃದ್ಧರಿಗೆ ಮಾಸಾಶನ ವಿತರಿಸಲಾಯಿತು. “ಎಸ್.ಆರ್. ಕಾಶಪ್ಪನವರ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಜರಾಯಿ ಖಾತೆ ಕೊಟ್ರೆ ಮುಂದೆ ಬರಲ್ಲ ಅಂತಾರೆ, ನನಗೆ ನಂಬಿಕೆ ಇಲ್ಲ: ಸಚಿವ ಲಮಾಣಿ
“ಮುಜರಾಯಿ ಖಾತೆ ಹೊಂದಿದವರಿಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ. ಹಾಗಾಗಿ, ನನಗೆ ಆ ಖಾತೆ ಕೊಟ್ಟಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಆದರೆ, ಈ ಬಗ್ಗೆ ನನಗೆ ನಂಬಿಕೆ ಇಲ್ಲ’ ಎಂದು ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು. “ನನಗೂ ದೇವಸ್ಥಾನಗಳಿಗೂ ತುಂಬಾ ನಂಟಿದೆ. ನಾನೇ ದೇವಸ್ಥಾನ ಕಟ್ಟಿಸಲು ನೆರವು ನೀಡಿದ್ದೇನೆ. ಹೀಗಿರುವಾಗ ದೇವರು ಯಾಕೆ ನನಗೆ ಕೇಡು ಮಾಡುತ್ತಾನೆ?’ ಎಂದು ಕೇಳಿದ ಅವರು, ನಾನು ಯಾರಿಗೂ ನನ್ನನ್ನು ಮಂತ್ರಿ ಮಾಡಿ ಎಂದು ಕೇಳಿದವನಲ್ಲ. ಯಾರಿಗೂ ನನ್ನ ಬಯೋಡೇಟಾ ಕೊಟ್ಟವ ನಲ್ಲ. ಸಚಿವ ಸ್ಥಾನ ಈಗ ನನಗೆ ಹುಡುಕಿ
ಕೊಂಡು ಬಂದಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
-ಉದಯವಾಣಿ
Comments are closed.