ಬೆಂಗಳೂರು: ತಪ್ಪುಗಳು ಜೀವನದ ಭಾಗ ಎಂದು ಒಪ್ಪಿಕೊಳ್ಳುವ ನಟಿ ಹರ್ಷಿಕಾ ಪೂಣಚ್ಚ ಸುದೀರ್ಘ ಕಾಲ ವಿರಮಿಸಿ ವಿಮರ್ಶೆ ಮಾಡಿಕೊಂಡದ್ದು ಅವರಿಗೆ ಒಳ್ಳೆಯ ಫಲವನ್ನೇ ನೀಡಿದೆ. ಈ ವರ್ಷ ಕಂಡು ಕಾಣೆಯಾದಂತ ‘ಭಲೇ ಜೋಡಿ’, ‘..ರೇ’ ‘ಬೀಟ್’ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಈಗ ದೊಡ್ಡ ಸಿನೆಮಾದ ಭಾಗವಾಗಿದ್ದಾರೆ. ಉಪೇಂದ್ರ, ಪ್ರೇಮ, ಶ್ರುತಿ ಹರಿಹರನ್ ಜೊತೆಗೆ ‘ಉಪ್ಪಿ ಮತ್ತೆ ಹುಟ್ಟಿ ಬಾ… ಇಂತಿ ಪ್ರೇಮ’ ಸಿನೆಮಾದಲ್ಲಿ ಹರ್ಷಿಕಾ ನಟಿಸಲಿದ್ದಾರೆ.
ಮಂಗಳವಾರ ಚಿತ್ರತಂಡ ಸೇರಿರುವ ಹರ್ಷಿಕಾ ತಮ್ಮ ತಾಳ್ಮೆ ಫಲ ನೀಡಿದೆ ಎನ್ನುತ್ತಾರೆ “ನನ್ನನ್ನು ಮತ್ತೆ ಗುರುತಿಸಲಾಗಿದೆ ಎಂದೆನಿಸುತ್ತಿದೆ. ಈಗ ಸದ್ಯಕ್ಕೆ ನನಗಾಗಿರುವ ಸಂತಸವನ್ನು ವಿವರಿಸಲು ಕಷ್ಟ” ಎನ್ನುತ್ತಾರೆ.
ತಮ್ಮ ವ್ಯಕ್ತಿತ್ವದಲ್ಲಿ ಭಾರಿ ಬದಲಾವಣೆ ತಂದುಕೊಳ್ಳಲು ದೀರ್ಘ ವಿರಾಮ ತೆಗೆದುಕೊಂಡಿದ್ದಾಗಿ ತಿಳಿಸುವ ಹರ್ಷಿಕಾ ಈಗ ಹೆಚ್ಚು ಆತ್ಮವಿಶ್ವಾಸದಿಂದಿರುವುದಾಗಿ ತಿಳಿಸುತ್ತಾರೆ. “ನನ್ನ 15 ನೇ ವಯಸ್ಸಿನಲ್ಲಿ ನನ್ನ ವೃತ್ತಿಜೀವನ ಪ್ರಾರಂಭಿಸಿದ್ದು. ಆಗ ಸಿನೆಮಾ ಬಗ್ಗೆ ತಿಳಿದದ್ದೇ ಕಡಿಮೆ. ಈ ಎಂಟು ವರ್ಷಗಳಲ್ಲಿನ ಏರುಪೇರು ನನಗೆ ಸಾಕಷ್ಟು ಕಲಿಸಿದೆ. ನಾನು ನನ್ನ ವೃತ್ತಿಜೀವನದಲ್ಲಿ ಮಾಡಿದ ತಪ್ಪುಗಳನ್ನು ಮನಗಂಡು ಅವುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನನಗೀಗ 23 ವರ್ಷಗಳಾಗಿದ್ದು ಹೊಸ ಬದಲಾವಣೆಯೊಂದಿಗೆ ನನ್ನ ಜೀವನದಲ್ಲಿ ಹೊಸ ಅಧ್ಯಾಯ ತೆರೆದುಕೊಂಡಂತಿದೆ” ಎನ್ನುತ್ತಾರೆ.
ಬಾಲಿವುಡ್ ಗೆ ಕೂಡ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿರುವ ಹರ್ಷಿಕಾ “ಎಲ್ಲದ್ದಕ್ಕೂ ಸಮಯ ಹಿಡಿಯುತ್ತದೆ ಮತ್ತು ನಾನು ತಾಳ್ಮೆಯಿಂದಿದ್ದೇನೆ. ಸದ್ಯಕ್ಕೆ ಉಪೇಂದ್ರ ಸಿನೆಮಾದಲ್ಲಿ ಪಾತ್ರ ಪಡೆಯುವುದು ದೊಡ್ಡ ಸಂಗತಿ. ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ನನ್ನ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸುವೆ” ಎನ್ನುತ್ತಾರೆ.
Comments are closed.