ಬೆಂಗಳೂರು, ಜು. ೧೭- ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರವಾಗಿದ್ದು, ಈ ಸರ್ಕಾರವನ್ನು ಕಿತ್ತೊಗೆಯಲು ಹೋರಾಟ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾರ್ಯಕರ್ತರಿಗೆ ಕರೆ ನೀಡಿದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಹಕಾರ ನಗರದಲ್ಲಿಂದು ನಡೆದ ಬಿಜೆಪಿಯ ಚೈತನ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ 3 ವರ್ಷದ ಆಢಳಿತಾವಧಿಯಲ್ಲಿ ಅಭಿವೃದ್ಧಿ ಶೂನ್ಯ. ಈ ಸರ್ಕಾರ ಜನವಿರೋಧಿ ಸರ್ಕಾರವೆಂದು ಅವರು ವಾಗ್ದಾಳಿ ನಡೆಸಿದರು.
ನಗರದ ಹಲವೆಡೆ ಭೂಕಬಳಿಕೆಯಾಗಿದೆ. ಭೂಕಬಳಿಕೆಯ ವರದಿ ಜಾರಿಯಾದರೆ ಹಲವು ಸಚಿವರು, ಶಾಸಕರು ಜೈಲು ಪಾಲಾಗುವುದು ನಿಶ್ಚಿತ. ಕಾಂಗ್ರೆಸ್ ಸರ್ಕಾರ ಖಜಾನೆ ಲೂಟಿ ಹೊಡೆದಿದೆ ಎಂದವರು ಟೀಕಿಸಿದರು.
ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ಪ್ರಯತ್ನ ನಡೆಸಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ಸಚಿವ ಜಾರ್ಜ್ ರಾಜೀನಾಮೆ ನೀಡಲೇಬೇಕು ಎಂದು ಒತ್ತಾಯಿಸಿದರು.
ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣವನ್ನು ಕೇಂದ್ರದ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಗಮನಕ್ಕೆ ತರಲಾಗಿದೆ. ಅವರು ರಾಜ್ಯದಿಂದ ವರದಿ ತರಿಸಿಕೊಂಡು ಮುಂದಿನ ಕ್ರಮಕೈಗೊಳ್ಳುತ್ತಾರೆ ಎಂದರು.
ಕೇಂದ್ರದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಕಳೆದ 2 ವರ್ಷಗಳಲ್ಲಿ ಜನಪರ ಕೆಲಸ ಮಾಡಿದೆ. ಕೇಂದ್ರ ಸರ್ಕಾರದ ಸಾಧನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ಮುಟ್ಟಿಸಬೇಕು ಎಂದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವುದು ನಿಶ್ಚಿತ ಬೆಂಗಳೂರು ನಗರದಲ್ಲೇ ಸುಮಾರು 20 ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಯಡಿಯೂರಪ್ಪ ವ್ಯಕ್ತಪಡಿಸಿದರು.
ಆತ್ಮಹತ್ಯೆ ಭಾಗ್ಯ
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಆರ್. ಅಶೋಕ್ ದಕ್ಷ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕಲ್ಪಿಸಿರುವುದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ ಎಂದು ಲೇವಡಿ ಮಾಡಿದರು.
ಈ ಸರ್ಕಾರದಲ್ಲಿ ದಕ್ಷ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಕಾಂಗ್ರೆಸ್ ಪುಡಾರಿಗಳು ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಇಂತಹ ಸರ್ಕಾರ ಇತಿಹಾಸದಲ್ಲಿ ಎಂದೂ ಇರಲಿಲ್ಲ. ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ಬೆಳಿ ಕಿರೀಟ ಸನ್ಮಾನ
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಕಾರ್ಯಕರ್ತರು ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು.
ಸಮಾವೇಶದಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಶಾಸಕರುಗಳಾದ ಎನ್. ಮುನಿರಾಜು, ಎಸ್.ಆರ್ ವಿಶ್ವನಾಥ್, ಮುಖಂಡ ಎ. ರವಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Comments are closed.