ಕರ್ನಾಟಕ

ಹೈಕೋರ್ಟ್‍ಗೆ ಮೊಹಾಂತಿ, ಪ್ರಸಾದ್ ಮೊರೆ

Pinterest LinkedIn Tumblr

high-courtಬೆಂಗಳೂರು, ಜು. 19 – ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಬೇಕೆಂದು ಮಡಿಕೇರಿ ಜೆಎಂಎಫ್‍ಸಿ ನ್ಯಾಯಲಯ ನೀಡಿರುವ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿ ಇಬ್ಬರು ಐಪಿಎಸ್ ಅಧಿಕಾರಿಗಳಾದ ಮೊಹಂತಿ, ಎ.ಎಂ ಪ್ರಸಾದ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ಖಾಸಗಿ ದೂರು ದಾಖಲಿಸುವಂತಿಲ್ಲ. ಆದರೆ ಗಣಪತಿ ಪ್ರಕರಣದಲ್ಲಿ ಅನುಮತಿ ಪಡೆಯದೇ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಲಾಗಿದೆ. ಯಾವುದೇ ಅಂಶಗಳನ್ನು ಪರಿಗಣಿಸದೆ ಮಡಿಕೇರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿವೇಚನೆ ಬಳಸದೆ ಆದೇಶ ನೀಡಿದ್ದು, ಈ ಆದೇಶವನ್ನು ರದ್ದುಪಡಿಸಬೇಕೆಂದು ಇಬ್ಬರು ಅಧಿಕಾರಿಗಳು ಹೈಕೋರ್ಟ್‍ನ ಏಕಸದಸ್ಯ ಪೀಠದ ಮುಂದೆ ಮೊರೆ ಹೋಗಿದ್ದಾರೆ.

ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾವೃದ್ಧಿ ಸಚಿವ ಕೆ.ಜೆ ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸರು ಕೇಳಿ ಬಂದಿದ್ದ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದು ನ್ಯಾಯಾಲಯದ ಆದೇಶ ರದ್ದತಿಗೆ ಮನವಿ ಮಾಡಿದ್ದಾರೆ.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆಜೆ ಜಾರ್ಜ್ ಹಾಗೂ ಐಎಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎಎಂ ಪ್ರಸಾದ್ ವಿರುದ್ಧ ಎಫ್‍ಐಆರ್ ದಾಖಲಿಸಲು ಪೆÇಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಗಣಪತಿ ಅವರ ಪುತ್ರ ಮಡಿಕೇರಿ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಅದರಂತೆ ನ್ಯಾಯಲಯ ಸಚಿವ ಕೆ.ಜೆ ಜಾರ್ಜ್ ಸೇರಿದಂತೆ ಮೂವರ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನಿನ್ನೆ ನ್ಯಾಯಾಲಯ ಆದೇಶ ನೀಡಿತ್ತು.

ಈ ಆದೇಶದ ಬೆನ್ನಲ್ಲೇ ಜಾರ್ಜ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಹಿರಿಯ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಮತ್ತು ಎ.ಎಂ ಪ್ರಸಾದ್‍ಗೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು.

Comments are closed.