ಹಾಸನ, ಜು. ೧೯: ಮರಳು ತುಂಬುವ ವಿಚಾರದಲ್ಲಿ ನಡೆದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರನ್ನು 15ಕ್ಕೂ ಹೆಚ್ಚು ಮಂದಿ ಇದ್ದ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಕಲೇಶಪುರ ನಿಡಿಗೆರೆಯಲ್ಲಿ ನಡೆದಿದೆ.
ನಿಡಿಗೆರೆಯ ಅಜಯ್ ಸಕ್ಪಾಲ್ (28) ಕೊಲೆಯಾದವರು. ಸ್ನೇಹಿತನೊಂದಿಗೆ ರಾತ್ರಿ ನಿಡಿಗೆರೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಎರಡು ಲಾರಿಗಳು ಈತನನ್ನು ಹಿಂಬಾಲಿಸಿ ಬಂದಂತಾಗಿದೆ. ಗಾಬರಿಗೊಂಡ ಅಜಯ್ ಸಕ್ಪಾಲ್ ಬೈಕನ್ನು ರಸ್ತೆಯ ಪಕ್ಕಕ್ಕೆ ತಿರುಗಿಸಿ ಲಾರಿಗಳನ್ನು ಹಿಂಬಾಲಿಸಿದ್ದಾರೆ.
ಬಳಿಕ ನಿಡಿಗೆರೆ ಮರಳು ಪಾಯಿಂಟ್ ಬಳಿ ಇಬ್ಬರು ಲಾರಿ ಚಾಲಕರು ಹಾಗೂ ಅಜಯ್ ಸಕ್ಪಾಲ್ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಅದೇ ಸಮಯಕ್ಕೆ ಹತ್ತಾರು ಜನರ ಗುಂಪು ಸಕ್ಪಾಲ್ ಮೇಲೆ ಏಕಾಏಕಿ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾರೆ.
ಘಟನೆ ಹಿನ್ನೆಲೆ
ನಿಡಿಗೆರೆ ಮರಳು ಕೇಂದ್ರದಲ್ಲಿ ಮರಳು ತೆಗೆಯುವ ಗುತ್ತಿಗೆಯು ರಾಮಚಂದ್ರ ಎಂಬುವರಿಗೆ ದೊರೆತಿತ್ತು. ಅವರು ಅದನ್ನು ಉಪಗುತ್ತಿಗೆಯಾಗಿ ಕಾಂಗ್ರೆಸ್ ಮುಖಂಡ ಡಿ.ಸಿ ಸಣ್ಣಸ್ವಾಮಿ ಅವರಿಗೆ ವಹಿಸಿಕೊಟ್ಟಿದ್ದರು. ಸಣ್ಣಸ್ವಾಮಿ ಅವರ ಪರವಾಗಿ ಆರೋಪಿ ಕುಮಾರ್ ಮರಳು ತೆಗೆಯುವ ಕೆಲಸ ನಿರ್ವಹಿಸುತ್ತಿದ್ದರು.
ಇದಕ್ಕೂ ಮೊದಲು ಅಜಯ್ ಸಕ್ಪಾಲ್ ಅವರೂ ಸಹ ಸಣ್ಣಸ್ವಾಮಿ ಅವರ ಮುಖಾಂತರವೇ ಮರಳು ತೆಗೆಯುವ ಕೆಲಸವನ್ನು ನಿರ್ವಹಿಸುತ್ತಿದ್ದರು. ನಂತರದಲ್ಲಿ ಕುಮಾರ್‌ಗೆ ಈ ಕೆಲಸ ವಹಿಸಿಕೊಟ್ಟಾಗ ಅವರಿಬ್ಬರ ನಡುವೆ ಘರ್ಷಣೆ ಆರಂಭವಾಗಿತ್ತು. ಅನೇಕ ಬಾರಿ ಅಜಯ್ ಸಕ್ಪಾಲ್ ಮತ್ತು ಕುಮಾರ್ ನಡುವೆ ಜಗಳಗಳಾಗುತ್ತಿದ್ದವು.
ಕಳೆದ ಕೆಲ ದಿನಗಳ ಹಿಂದೆಯೂ ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ಘರ್ಷಣೆ ಉಂಟಾಗಿತ್ತು. ಇದೇ ಕಾರಣದಿಂದ ಈ ಕೊಲೆ ನಡೆದಿರಬಹುದು ಎನ್ನಲಾಗುತ್ತಿದೆ. ಕೊಲೆಯಾದ ಅಜಯ್ ಸಕ್ಪಾಲ್ ಅವರ ಸಹೋದರ ಅರುಣ್ ಸಕ್ಪಾಲ್ ಅವರು ಯಸಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಮುಖ ಆರೋಪಿ ಕುಮಾರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
Comments are closed.