ಕರ್ನಾಟಕ

ಹೊಸಕೋಟೆಯ ತರಕಾರಿ ತೋಟದಿಂದ ನಾಲ್ವರು ಜೀತದಾಳುಗಳ ಬಿಡುಗಡೆ

Pinterest LinkedIn Tumblr
????????????????????????????????????
????????????????????????????????????

ಬೆಂಗಳೂರು: ಜುಲೈ 04, 2016: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ತರಕಾರಿ ತೋಟದಿಂದ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಜೀತದಾಳುಗಳನ್ನು ಇಂಟರ್‌ನ್ಯಾಷನಲ್‌ ಜಸ್ಟೀಸ್‌ ಮಿಷನ್‌ ನೆರವಿನೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಈ ಜೀತದಾಳುಗಳಲ್ಲಿ ಮೂವರನ್ನು ತಮಿಳುನಾಡಿನ ಕೃಷ್ಣಗಿರಿಯವರು ಹಾಗೂ ಒಬ್ಬನನ್ನು ಕರ್ನಾಟಕದ ರಾಮನಗರದನು ಎಂದು ಗುರುತಿಸಲಾಗಿದೆ. ಇವರನ್ನು ತೋಟದ ಮಾಲೀಕ ಹಾಗೂ ಆತನ ಐವರು ಮಕ್ಕಳು ಇವರನ್ನು ಜೀತಕ್ಕೆ ಇಟ್ಟುಕೊಂಡಿದ್ದ. ಇವರ ಪೋಷಕರಿಗೆ ಮುಂಗಡ ಹಣ ನೀಡುವ ಮೂಲಕ ಇವರನ್ನು ಜೀತದಾಳುಗಳನ್ನಾಗಿ ಮಾಡಿಕೊಂಡಿದ್ದ.

ತೋಟದ ಮಾಲೀಕ ಹಾಗೂ ಮಕ್ಕಳ ವಿರುದ್ಧ ಭಾರತೀಯ ದಂಡ ಸಂಹಿತೆಯ 370ನೇ ಕಲಮಿನ ಅಡಿ ಹಾಗೂ ಜೀತದಾಳು ಪದ್ಧತಿ, ಮಾನವ ಕಳ್ಳಸಾಗಾಣಿಕೆ ನಿಯಂತ್ರಣ ಕಾಯ್ದೆ ಹಾಗೂ ಇತರ ಕಾಯ್ದೆಗಳ ಅಡಿ ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

13,14,18 ಮತ್ತು 25 ವರ್ಷದವರನ್ನು ಕ್ರಮವಾರಿ ಐದು, ನಾಲ್ಕು, ಏಳು ಮತ್ತು 10 ವರ್ಷಗಳ ವರ್ಷಗಳ ಹಿಂದೆ ತೋಟದ ಕೆಲಸಕ್ಕೆ ಕರೆತರಲಾಗಿತ್ತು. ಅವರನ್ನು ಕರೆದುಕೊಂಡು ಬಂದ ವೇಳೆ ಎಲ್ಲರೂ ಅಪ್ರಾಪ್ತ ವಯಸ್ಕರಾಗಿದ್ದರು. ಅವರ ಪೋಷಕರಿಗೆ ನೀಡಿದ್ದ 20ಸಾವಿರದಿಂದ 60ಸಾವಿರ ರೂಪಾಯಿಗಳ ಮುಂಗಡ ಹಣವನ್ನು ಹಿಂದಿರುಗಿಸದ ಕಾರಣವೊಡ್ಡಿ ಇವರನ್ನು ಒತ್ತಾಯದಿಂದ ದುಡಿಸಿಕೊಳ್ಳಲಾಗುತ್ತಿತ್ತು. ಅವರಿಗೆ ಉತ್ತಮ ವಸತಿ, ವಾರದ ರಜೆ, ಕಾಲಕ್ಕೆ ತಕ್ಕಂತೆ ಉತ್ತಮ ಸಂಬಳ ಎಲ್ಲವನ್ನೂ ನೀಡುವುದಾಗಿ ಆರಂಭದಲ್ಲಿ ವಾಗ್ದಾನ ಮಾಡಿದ್ದರು. ಆದರೆ ಅವುಗಳನ್ನು ಪಾಲಿಸದ ಮಾಲೀಕ ಇವರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ.

‘ಹೀಗೆ ಜೀತಕ್ಕೆ ಇಟ್ಟುಕೊಂಡು ದುಡಿಸಿಕೊಳ್ಳುತ್ತಿದ್ದುದು ಅತ್ಯಂತ ಹೀನಾಯ ಕಾರ್ಯ ಎಂದು ಹೊಸಕೋಟೆ ತಹಶೀಲ್ದಾರ್‌ ಜಿ.ಬಿ, ಚಂದ್ರಶೇಖರ್‌ ಹೇಳಿದ್ದಾರೆ. ಇವರು ರಕ್ಷಣಾ ಕಾರ್ಯಾಚಾರಣೆಯ ನೇತೃತ್ವ ವಹಿಸಿದ್ದರು.

‘ಕರ್ನಾಟಕ ಸರ್ಕಾರ ಇಂಥ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಎಲ್ಲಿಯೇ ಇಂಥ ಕೃತ್ಯ ನಡೆಯುತ್ತಿರುವುದು ಕಂಡುಬಂದರೆ ಅಂಥ ಉದ್ಯಮ ಅಥವಾ ಕಾರ್ಖಾನೆ ಮೇಲೆ ದಾಳಿ ನಡೆಸಲಾಗುವುದು. ಈ ಪ್ರಕರಣದಲ್ಲಿ ತಪ್ಪಿತಸ್ಥರು ಕನಿಷ್ಠ 10 ವರ್ಷಗಳ ಶಿಕ್ಷೆ ಅನುಭವಿಸುವಂಥ ಕೃತ್ಯ ಎಸಗಿದ್ದಾರೆ’ ಎಂದು ಅವರು ಹೇಳಿದರು.

ಈ ಎಲ್ಲ ಬಿಡುಗಡೆಗೊಂಡ ಕಾರ್ಮಿಕರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪವಿಭಾಗಾಧಿಕಾರಿ ಎಂ.ಕೆ.ಜಗದೀಶ್‌ ಅವರು ಬಿಡುಗಡೆ ಪ್ರಮಾಣ ಪತ್ರವನ್ನು ನೀಡಿದರು. ಈ ಸಂತ್ರಸ್ತರಿಗೆಲ್ಲಾ ಪುನರ್ವಸತಿ ಕಲ್ಪಿಸಲಾಗುವುದು.

ಈ ನಾಲ್ವರು ಕಾರ್ಮಿಕರನ್ನು ವಾರದ ಏಳೂ ದಿನಗಳ ಕಾಲ ದುಡಿಸಿಕೊಳ್ಳಲಾಗುತ್ತಿತ್ತು. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8ರವರೆಗೆ ಅಂದರೆ ದಿನದಲ್ಲಿ 14 ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿತ್ತು. ತೋಟದಲ್ಲಿ ಬೆಳೆಯುವ ಹೂಕೋಸು, ಬೀನ್ಸ್‌, ಬೀಟ್‌ರೂಟ್‌, ಗುಲಾಬಿ ಹೂವು ಇವುಗಳ ಕೆಲಸ ಕಾರ್ಯದಲ್ಲಿ ಅವರನ್ನು ತೊಡಗಿಸಿಕೊಳ್ಳಲಾಗುತ್ತಿತ್ತು. ಗಿಡಗಳನ್ನು ನೆಡುವುದು, ನೀರು ಹಾಕುವುದು, ಗೊಬ್ಬರ ನೀಡುವುದು, ಕೊಯಿಲು ಮಾಡುವುದು, ಗಿಡಗಳಿಗೆ ಔಷಧೋಪಚಾರ ಮಾಡುವುದು ಎಲ್ಲವನ್ನೂ ಮಾಡಬೇಕಿತ್ತು. ಹಾನಿಕಾರದ ರಸಗೊಬ್ಬರಗಳನ್ನು ಗಿಡಗಳಿಗೆ ಹಾಕುವಾಗ ಈ ಕಾರ್ಮಿಕರಿಗೆ ಮೂಗುಗವಸವಾಗಲೀ ಮುಖ ಮುಚ್ಚಿಕೊಳ್ಳಲು ಯಾವುದೇ ರೀತಿಯ ರಕ್ಷಣಾ ಕವಚ ನೀಡುತ್ತಿರಲಿಲ್ಲ. ಗುಲಾಬಿ ಗಿಡಗಳ ಮುಳ್ಳಿನಿಂದಾಗಿ ಕೈಗಳಿಗೆ ಹಾನಿಯಾಗದಂತೆಯೂ ಯಾವುದೇ ರಕ್ಷಣೆ ನೀಡರಲಿಲ್ಲ. ಇದರಿಂದಾಗಿ ಈ ನಾಲ್ವರೂ ಅನೇಕ ಬಾರಿ ಗಂಭೀರ ಸ್ವರೂಪದಲ್ಲಿ ಗಾಯ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಇದರಲ್ಲಿಯೇ ತರಕಾರಿ–ಹೂವುಗಳ ಪ್ಯಾಕ್‌ ಮಾಡುವುದು, ಅವುಗಳನ್ನು ಪ್ರತ್ಯೇಕಿಸುವುದು ಎಲ್ಲವೂ ಈ ನಾಲ್ವರ ಜವಾಬ್ದಾರಿಯಾಗಿತ್ತು. ಇವಿಷ್ಟೇ ಅಲ್ಲದೇ ಐದು ಹಸುಗಳ ಪಾಲನೆಯ ಕೆಲಸವನ್ನೂ ಇವರಿಗೇ ನಿರ್ವಹಿಸಲಾಗಿತ್ತು. ಇವುಗಳ ಜೊತೆಗೆ ಅವರು ಮಾಲೀಕರ ಮನೆಯಲ್ಲಿಯೂ ಮನೆಕೆಲಸವನ್ನು ಮಾಡಬೇಕಿತ್ತು. ಇವರಿಂದ ಹೊರಲು ಸಾಧ್ಯವಿಲ್ಲದಷ್ಟು ಭಾರದ ಸಾಮಗ್ರಿಗಳನ್ನು ಹೊರಲು ನೀಡಲಾಗುತ್ತಿತ್ತು.

ಈ ಕೆಲಸಗಳಿಗೆ ಪ್ರತಿಯಾಗಿ ವಾರಕ್ಕೆ 10ರೂಪಾಯಿಗಳನ್ನು ನೀಡಲಾಗುತ್ತಿತ್ತು. ಅವರಿಗೆ ಕನಿಷ್ಠ ಮಟ್ಟದ ಆಹಾರ ನೀಡಲಾಗುತ್ತಿತ್ತು. ಈ ಕಾರ್ಮಿಕರು ಹೇಳಿದ ಪ್ರಕಾರ ಅವರಿಗೆ ಮಾಲೀಕರೆಲ್ಲಾ ಬಿಟ್ಟು ಉಳಿದ ಹಳಸಿದ ಆಹಾರ ನೀಡಲಾಗುತ್ತಿತ್ತು. ಇವರಿಗೆ ಉಳಿಯಲು ನೀಡಿದ್ದು ಕೊಟ್ಟಿಗೆ. ದನಗಳ ಜೊತೆಯಲ್ಲಿಯೇ ಕೊಟ್ಟಿಗೆಯಲ್ಲಿ ಇರಬೇಕಿತ್ತು. ಕೊಟ್ಟಿಗೆಯಲ್ಲಿ ರಾಶಿಯಿದ್ದ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತ ತಾವು ಮಲಗಬೇಕಿತ್ತು ಎಂದು ಈ ಕಾರ್ಮಿಕರು ಹೇಳಿಕೆ ನೀಡಿದ್ದಾರೆ.

ಈ ಹೀನಾಯ ಸ್ಥಿತಿಯಿಂದಾಗಿ ನಾವು ತುಂಬಾ ತೊಂದರೆ ಅನುಭವಿಸಿದ್ದೆವು. ಅಲ್ಲಿಂದ ಓಡಿ ಬರುವ ಮನಸ್ಸು ಆಗುತ್ತಿತ್ತು. ಆದರೆ ಏನನ್ನೂ ಮಾಡದೇ ಅಸಹಾಯಕರಾಗಿದ್ದೆವು’ ಎನ್ನುತ್ತಾನೆ ಇವರಲ್ಲಿ ಇದ್ದ 18 ವರ್ಷದ ಯುವಕ. ‘ನಮಗೆ ಹುಷಾರು ಇಲ್ಲದಾಗ ಕೂಡ ಮಲಗಲು ಬಿಡುತ್ತಿರಲಿಲ್ಲ. ಆಗಲೂ ದುಡಿಸಿಕೊಳ್ಳುತ್ತಿದ್ದರು. ಕೆಲಸ ಮಾಡದಿದ್ದರೆ ಚೆನ್ನಾಗಿ ಹೊಡೆಯುತ್ತಿದ್ದರು. ನಾವು ಪರಸ್ಪರ ಮಾತಾಡುವಂತೆಯೂ ಇರಲಿಲ್ಲ. ಹೀಗೆ ಮಾತಾಡಿದ್ದು ಕಂಡುಬಂದರೆ ದೈಹಿಕ ಹಿಂಸೆ ನೀಡುತ್ತಿದ್ದರು. ನಾಲ್ಕು ತಿಂಗಳ ಹಿಂದೆ ನನಗೆ ಮಾಲೀಕ ಸಿಕ್ಕಾಪಟ್ಟೆ ಹೊಡೆದ. ಆ ಹಿಂಸೆಯಿಂದ ತಡೆದುಕೊಳ್ಳಲಾಗದೇ ತೋಟದಿಂದ ನಾನು ಓಡಿ ಬಂದೆ. ಮನೆಗೆ ಹೋಗಿದ್ದೆ. ಆದರೆ ನನ್ನ ಗ್ರಾಮಕ್ಕೆ ಬಂದ ಮಾಲೀಕನ ಮಗ ನನ್ನನ್ನು ವಾಪಸ್‌ ಕರೆದುಕೊಂಡು ಹೋದ. ಮನೆಯಲ್ಲಿ ಹಣಕಾಸಿನ ತೊಂದರೆ ಇದ್ದುದರಿಂದ ನನ್ನ ಅಪ್ಪ–ಅಮ್ಮ ನನ್ನನ್ನು ವಾಪಸ್ ಕಳುಹಿಸಿದರು ಎಂದು ಅಳಲನ್ನು ಬಿಚ್ಚಿಟ್ಟ ಆ ಯುವಕ.

ವರ್ಷದಲ್ಲಿ ಎರಡು ಹಬ್ಬಕ್ಕೆ ಎರಡು ದಿನ ಮಾತರ ಅವರಿಗೆ ಊರಿಗೆ ಹೋಗಲು ಬಿಡಲಾಗುತ್ತಿತ್ತು. 4–5 ದಿನಗಳು ಅವರಿಗೆ ಮನೆಯಲ್ಲಿ ಇರಲು ಅವಕಾಶ ನೀಡಲಾಗುತ್ತಿತ್ತು. ನಾಲ್ಕು ದಿನಗಳಾದರೂ ವಾಪಸ್‌ ಬರದಿದ್ದರೆ ಅವರ ಮನೆಗೆ ಮಾಲೀಕ ಹೋಗಿ ವಾಪಸ್‌ ಕರೆತರುತ್ತಿದ್ದ. ಅವರು ವಾಪಸ್‌ ಬರಲು ನಿರಾಕರಿಸುತ್ತಿದ್ದರೆ ಪೋಷಕರು ಪಡೆದುಕೊಂಡಿರುವ ಸಾಲವನ್ನು ಬಡ್ಡಿ ಸಹಿತ ನೀಡುವಂತೆ ಹೇಳುತ್ತಿದ್ದ. ಆಗ ಅಸಹಾಯಕರಾದ ಪೋಷಕರು ಮಕ್ಕಳನ್ನು ವಾಪಸ್‌ ಕಳಿಸುತ್ತಿದ್ದರು.

‘ಒತ್ತಾಯಪೂರ್ವಕವಾಗಿ ಮಕ್ಕಳನ್ನು ಜೀತಕ್ಕೆ ಇಟ್ಟುಕೊಂಡು ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಿರುವುದು ಮಾತ್ರವಲ್ಲದೇ ಅವರ ಮೇಲೆ ದೌರ್ಜನ್ಯ ಎಸಗಿರುವ ಸಂಬಂಧ, ಇಂಥ ಮಾಲೀಕನ ವಿರುದ್ಧ ಐಪಿಸಿಯ 370 (ಮಾನವ ಕಳ್ಳಸಾಗಣೆ) ಅಡಿ ಶಿಕ್ಷೆ ಒಳಪಡಿಸಬಹುದು’ ಎನ್ನುತ್ತಾರೆ ಇಂಟರ್‌ನ್ಯಾಷನಲ್‌ ಜಸ್ಟೀಸ್ ಮಿಷನ್‌ನ ನಿರ್ದೇಶಕರಾದ ಸಶ್ಮೀತಾ ಮಲ್ಮಿಈ ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚು ಜನರನ್ನು ಕಳ್ಳಸಾಗಣೆ ಮಾಡಿರುವ ಹಿನ್ನೆಲೆಯಲ್ಲಿ ಐಪಿಸಿಯ 370ನೇ ಕಲಮಿನ ಅಡಿ ಅಪರಾಧಿಗಳಿಗೆ ಕನಿಷ್ಠ 10 ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ. ಈ ಕುಟುಂಬದವರಿಗೆ ಹಣ ನೀಡಿ ಆಮಿಷ ಒಡ್ಡಿ ಅವರ ಕುಟುಂಬದ ಸ್ವಾತಂತ್ರ್ಯವನ್ನು ಹರಣ ಮಾಡುವುದು ಜೀತಪದ್ಧತಿ ನಿರ್ಮೂಲನಾ ಕಾಯ್ದೆಯ ಪ್ರಕಾರ ಅಪರಾಧ. ಈ ಅಪರಾಧಕ್ಕೆ ಕನಿಷ್ಠ ಮೂರು ವರ್ಷಗಳ ಶಿಕ್ಷೆ ಇದೆ.

ಮುಂಗಡ ಹಣ ನೀಡಿದ್ದನ್ನೇ ಪರಿಗಣನೆಗೆ ತೆಗೆದುಕೊಂಡರೂ ಇವರಿಗೆ ಅತಿ ಕನಿಷ್ಠ ಮಟ್ಟದ ಕೂಲಿ ನೀಡುತ್ತಿದ್ದುದು ಅಪರಾಧ. ಮುಂಗಡ ಹಣದ ರೂಪದಲ್ಲಿ ಅವರಿಗೆ 20ಸಾವಿರ, 21ಸಾವಿರ, 30ಸಾವಿರ ಮತ್ತು 60ಸಾವಿರ ರೂಪಾಯಿಗಳನ್ನು ನೀಡಲಾಗಿತ್ತು. ವಾರಕ್ಕೆ ನೀಡಲಾಗುವ 10ರೂಪಾಯಿ ಹೊರತುಪಡಿಸಿದರೆ ಅವರಿಗೆ ಒಂದು ದಿನಕ್ಕೆ ₹55, ₹58 ಹಾಗೂ ₹84 ಮತ್ತು ₹164 ನೀಡಲಾಗುತ್ತಿತ್ತು. ಆದರೆ ಕೃಷಿ ಕಾರ್ಮಿಕರಿಗೆ ಕಾನೂನಿನ ಪ್ರಕಾರ ಕರ್ನಾಟಕದಲ್ಲಿ ಕನಿಷ್ಠ ವೇತನ ₹ 288.66 ಪ್ರತಿದಿನಕ್ಕೆ ಇದೆ. ಅದೂ ಅವರನ್ನು ಕೇವಲ 8ಗಂಟೆ ಮಾತ್ರ ದುಡಿಸಿಕೊಳ್ಳಬಹುದು. ಈ ಪ್ರಕರಣದಲ್ಲಿ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡುತ್ತಿದ್ದು ಮಾತ್ರವಲ್ಲದೇ ಅವರಿಗೆ ಕಾನೂನಿನಲ್ಲಿ ಉಲ್ಲೇಖಿತಗೊಂಡಿರುವ ಅವಧಿಗಿಂತಲೂ ಹೆಚ್ಚಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಅವರಿಗೆ ಎಲ್ಲಿಯೂ ಹೋಗಲು ಬಿಡುತ್ತಿರಲಿಲ್ಲ. ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು. ಇವೆಲ್ಲವೂ ಮಾನವ ಕಳ್ಳಸಾಗಾಣಿಕೆ ಎನಿಸುತ್ತಿದೆ.
*********
ಇಂಟರ್ನ್ಯಾಷನಲ್ ಜಸ್ಟೀಸ್ ಮಿಷನ್‌ (ಐಜೆಎಂ) ಇದು ಸ್ವಯಂಸೇವಾ ಸಂಸ್ಥೆ. ಜೀತದಾಳುಗಳು ಸೇರಿದಂತೆ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಂತ್ರಸ್ತರಿಗೆ ನೆರವು ನೀಡುವುದು ಅವರ ಪರವಾಗಿ ಕಾಳಜಿ ತೋರುವುದು ಇದರ ಉದ್ದೇಶ. ನಮ್ಮ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಸ್ಥಳೀಯ ಜಿಲ್ಲಾ ಆಡಳಿತ, ಪೊಲೀಸರು ಮತ್ತು ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೆರವಿನೊಂದಿಗೆ ರಾಜ್ಯದ ಎಲ್ಲ ಭಾಗಗಳ ಸಂತ್ರಸ್ತರನ್ನು ರಕ್ಷಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಕೆಲಸವನ್ನು ಮಾಡುತ್ತಿದೆ. ಈ ಮೂಲಕವಾಗಿ ಸಾಮಾಜಿಕ ನ್ಯಾಯವನ್ನು ಒದಗಿಸುವುದು ಇದರ ಮುಖ್ಯ ಉದ್ದೇಶ.

ಭಾರತದಲ್ಲಿರುವ ವಿವಿಧ ಐಜೆಎಂ ಕಚೇರಿಗಳ ಮೂಲಕ 2001ರಿಂದ ಇಲ್ಲಿಯವರೆಗೆ ಸುಮಾರು 10ಸಾವಿರ ಜೀತದಾಳುಗಳನ್ನು ರಕ್ಷಣೆ ಮಾಡಲಾಗಿದೆ.

ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ಕಾಯ್ದೆ–1976ರ ಅಡಿ ಜೀತಪದ್ಧತಿಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) 370ನೇ ಕಲಮು, ಅಪರಾಧಿಕ ಕಾನೂನು ತಿದ್ದುಪಡಿ ಕಾಯ್ದೆ 2013ರ ಪ್ರಕಾರ ಯಾರಾದರೂ ಬೆದರಿಸಿ, ಮೋಸದಿಂದ, ಅಪಹರಣ ಮಾಡಿ, ಆಮಿಷ ಒಡ್ಡಿ, ವಂಚಿಸಿ ಇಲ್ಲವೇ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದ್ದರೆ, ಸ್ಥಳಾಂತರಿಸಿದ್ದರೆ ಇಲ್ಲವೇ ಒಂದೆಡೆಯಿಂದ ಇನ್ನೊಂದೆಡೆ ವರ್ಗಾಯಿಸಿದ್ದರೆ ಅದು ಮಾನವ ಕಳ್ಳಸಾಗಣೆ ಆಗುತ್ತದೆ. ಜೀತಪದ್ಧತಿ ಕೂಡ ಅನೇಕ ಸಂದರ್ಭಗಳಲ್ಲಿ ಮಾನವ ಕಳ್ಳಸಾಗಣೆಯೇ ಆಗುತ್ತದೆ. ಏಕೆಂದರೆ ಬೆದರಿಸಿ, ಮೋಸದಿಂದ, ಆಮಿಷ ಒಡ್ಡಿ ಇಲ್ಲವೇ ವಂಚನೆ ಮಾಡುವ ಮೂಲಕ ಆರಂಭದಲ್ಲಿ ಸಂಬಂಧ ಬೆಳೆಸಿ ನಂತರ ಅವರನ್ನು ಶೋಷಣೆಗೆ ಒಳಪಡಿಸುವುದು, ಅವರ ಸ್ವಾತಂತ್ರ್ಯ ಕಿತ್ತುಕೊಳ್ಳುವುದು, ನಿಗದಿತ ವೇತನಕ್ಕಿಂತ ಕಡಿಮೆವೇತನ ನೀಡಿ ವಂಚಿಸುವುದು ಮಾಡಲಾಗುತ್ತದೆ. ಮಾನವ ಕಳ್ಳ ಸಾಗಣೆಯು ಜಾಮೀನು ರಹಿತ ಹಾಗೂ ಕಾಗ್ನಿಜಿಬಲ್‌ ಅಪರಾಧ. ಅನೇಕ ವ್ಯಕ್ತಿಗಳನ್ನು ಮಾನವಕಳ್ಳ ಸಾಗಣೆ ಮಾಡಿದ್ದಲ್ಲಿ ಅಂಥ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯೂ ಆಗಬಹುದು.

ಈ ಕಾಯ್ದೆ ಹಾಗೂ ಸುಪ್ರೀಂಕೋರ್ಟ್‌ ನಿರ್ದೇಶನದ ಅನ್ವಯ ಜೀತದಾಳುಗಳಿಗೆ ದೈಹಿಕವಾಗಿ ನಿಯಂತ್ರಣ ಹೇರಲಾಗಿತ್ತು ಎಂಬ ಬಗ್ಗೆ ಸಾಬೀತು ಮಾಡುವ ಅಗತ್ಯವಿಲ್ಲ. ಜೀತದಾಳು ಎಂದರೆ ಅದು ಮಕ್ಕಳು, ಮಹಿಳೆಯರು ಸೇರಿದಂತೆ ಯಾರೇ ಆಗಿರಬಹುದು.

Comments are closed.