ಮೇಲುಕೋಟೆ: ಚೆಲುವನಾರಾಯಣಸ್ವಾಮಿಯವರ ಶ್ರೀಕೃಷ್ಣರಾಜಮುಡಿ ಜಾತ್ರಾಮಹೋತ್ಸವಕ್ಕೆ ಗುರುವಾರ ರಾತ್ರಿ ನಡೆದ ಕಲ್ಯಾಣೋತ್ಸವದೊಂದಿಗೆ ವಿದ್ಯಕ್ತವಾಗಿ ಚಾಲನೆ ದೊರೆಯಿತು. ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷದಿಂದ ಹತ್ತು ದಿನಗಳ ಕಾಲ ನಡೆಯುವ ಈ ಆಷಾಡಜಾತ್ರಾ ಮಹೋತ್ಸವ ಜುಲೈ 29ರವರೆಗೆ ನಡೆಯಲಿದೆ.
ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರ ವಿಶೇಷ ದಿನದ ಅಂಗವಾಗಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ವೇದಮಂತ್ರಗಳೊಂದಿಗೆ ಶ್ರೀಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ಮದ್ಯಾಹ್ನ ಮಹಾಭಿಷೇಕ ನೆರವೇರಿಸಲಾಯಿತು. ಇದಕ್ಕೂ ಮುನ್ನ ಬ್ರಹ್ಮೋತ್ಸವದ ಆರಂಭದ ಪ್ರತೀಕವಾಗಿ ದ್ವಜಾರೋಹಣ ನೆರವೇರಿಸಿ ಕೃಷ್ಣರಾಜಮುಡಿ ಕಿರೀಟಧಾರಣೆಗೆ ದೇವಾನುದೇವತೆಗಳಿಗೆ ಮತ್ತು ಭಕ್ತರಿಗೆ ಆಹ್ವಾನ ನೀಡಲಾಯಿತು. ಬೆಳಿಗ್ಗೆ 11ರವೇಳೆಗೆ ಆರಂಭವಾದ ಮಹಾಭಿಷೇಕದ ಕಾರ್ಯಕ್ರಮಗಳು ಸಂಜೆ ಆರು ಗಂಟೆಗೆ ಮುಕ್ತಾಯವಾದವು.
ಪುತ್ರಭಾಗ್ಯ ಅಪೇಕ್ಷಿಸಿದ್ದ ಮುಮ್ಮುಡಿ ಕೃಷ್ಣರಾಜ ಒಡೆಯರ್ ಕುಲದೈವ ಶ್ರೀಚೆಲುವನಾರಾಯಣಸ್ವಾಮಿಗೆ ಹರಕೆಕಟ್ಟಿಕೊಂಡ ನಂತರ ಅವರ ಅಪೇಕ್ಷೆ ಈಡೇರಿದಪರಿಣಾಮ ಸ್ವಾಮಿಗೆ ಅಪೂರ್ವವಜ್ರಗಳಿಂದ ಕೂಡಿದ ಶ್ರೀಕೃಷ್ಣರಾಜಮುಡಿ ಕಿರೀಟ ಮತ್ತು ಗಂಡುಬೇರುಂಡ ಪದಕವನ್ನು ಸಮರ್ಪಿಸಿ ಆಷಾಡಮಾಸದಲ್ಲಿ ಜಾತ್ರಾ ಮಹೋತ್ಸವ ಆರಂಬಿಸಿದ್ದರು. ಜೊತೆಗೆ ಕೃಷ್ಣರಾಜಮುಡಿ ಬ್ರಹ್ಮೋತ್ಸವವೇಳೆ ನಡೆಯುವ ತೀರ್ಥಸ್ನಾನದಂದು ಪೂಜೆನಡೆಯುವ ಸಲುವಾಗಿ ಕಲ್ಯಾಣಿಯಲ್ಲಿ ಆಕರ್ಷಕ ಭುವನೇಶ್ವರಿ ಮಂಟಪ ನಿರ್ಮಿಸಿದ್ದಾರೆ. ಅಂದಿನಿಂದ ಶ್ರೀಕೃಷ್ಣರಾಜಮುಡಿ ಜಾತ್ರಾ ಮಹೋತ್ಸವ ಅನೂಚಾನವಾಗಿ ನಡೆದುಕೊಂಡು ಬಂದಿದೆ.
ದೇವಾಲಯದಲ್ಲಿ ಇಡೀದಿನ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆದ ಪರಿಣಾಮ ಕಲ್ಯಾಣೋತ್ಸವ ರಾತ್ರಿ 9 ಗಂಟೆಗೆ ಆರಂಭವಾಯಿತು. ಶಾಸ್ರ್ತೋಕ್ತ ವಿಧಿವಿದಾನಗಳೊಂದಿಗೆ ಶ್ರೀಚೆಲುವನಾರಾಯಣಸ್ವಾಮಿಗೆ ಯುದುಗಿರಿ ನಾಯಕಿ ಅಮ್ಮನವರೊಂದಿಗೆ ಕಲ್ಯಾಣೋತ್ಸವ ವೈಭವದಿಂದ ನೆರವೇರಿತು. ಈ ಬಾರಿ ಉತ್ಸವದೊಂದಿಗೆ ಒಂದನೇ ತಿರುನಾಳ್ ಬಂದಿದ್ದ ಕಾರಣ ರಾತ್ರಿ ದ್ವಜಾರೋಹಣ, ಬೇರಿತಾಡನ ಮತ್ತು ತಿರುಪ್ಪೊರೈಸಹ ನೆರವೇರಿದವು.
ಕೃಷ್ಣರಾಜಮುಡಿ ಉತ್ಸವ :
ಶ್ರೀಚೆಲುವನಾರಾಯಣಸ್ವಾಮಿಗೆ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ಭಾನುವಾರ ರಾತ್ರಿ 7 ಗಂಟೆಗೆ ನೆರವೇರಲಿದೆ. ಗರುಡಾರೂಢನಾದ ಚೆಲುವನಾರಾಯಣನಿಗೆ ವಖ್ರಖಚಿತ ಕಿರೀಟವನ್ನು ಧರಸಿ ನಾಲ್ಕೂ ಬೀದಿಗಳಲ್ಲಿ ಉತ್ಸವ ನೆರವೇರಿಸಲಾಗುತ್ತದೆ ವಜ್ರಖಚಿತ ಈ ಕಿರೀಟ 29ರವರೆಗೆ ಪ್ರತಿದಿನ ವಿವಿಧ ಉತ್ಸವಗಳಲ್ಲಿ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಲಿದೆ .
ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜುಲೈ 25 ರ ಸೋಮವಾರ ಸಂಜೆ ಪ್ರಹ್ಲಾದಪರಿಪಾಲನ ರಾತ್ರಿ ಗರುಡವಾಹನೋತ್ಸವ, 26ರ ಮಂಗಳವಾರ ಸಂಜೆ ಗಜೇಂದ್ರಮೋಕ್ಷ ಆನೆವಾಹನೋತ್ಸವ 27ರ ಬುಧವಾರ ಬೆಳಿಗ್ಗೆ ರಥೋತ್ಸವ ನಿಮಿತ್ತ ಸಾಂಕೇತಿಕ ಉತ್ಸವ ಹಾಗೂ 29 ರ ಶುಕ್ರವಾರ ಬೆಳಿಗ್ಗೆ ಕಲ್ಯಾಣಿಯಲ್ಲಿ ತೀರ್ಥಸ್ನಾನ ಸಂಜೆ ಪರಕಾಲ ಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವ ನೆರವೇರಲಿದೆ
Comments are closed.