ಕರ್ನಾಟಕ

ಚಿಕ್ಕೋಡಿ ಜಲಸಾಗರ: ಬೆಳಗಾವಿಯಲ್ಲಿ ಸೇತುವೆ ಮುಳುಗಡೆ

Pinterest LinkedIn Tumblr

belgaum4-cap-clrಬೆಳಗಾವಿ, ಆ. ೪- ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯ ಕೃಷ್ಣಾ, ಧೂದಗಂಗಾ, ವೇದಗಂಗಾ ನದಿಗಳಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರಿನಿಂದಾಗಿ ಚಿಕ್ಕೋಡಿ ತಾಲೂಕಿನ 8 ಸೇತುವೆಗಳು ಮುಳುಗಡೆ ಹೊಂದಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೃಷ್ಣಾ ವೇದಗಂಗಾ, ಧೂದಗಂಗಾ ನದಿಗಳು ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನಿಂದ ಅಪಾಯದ ಮಟ್ಟ ತಲುಪಿವೆ.

ಮುಳುಗಿದ ಸಂಪರ್ಕ ಸೇತುವೆಗಳು

ಅಪಾರ ಪ್ರಮಾಣದ ನೀರು ನದಿಗಳಿಗೆ ಹರಿದು ಬರುತ್ತಿರುವುದರಿಂದ ಈ ನದಿಗಳಿಗೆ ನಿರ್ಮಿಸಲಾಗಿರುವ 8 ಸಂಪರ್ಕ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ.

ಕಲ್ಲೋಳಿ-ಯಡೂರ, ಜಾತ್ರಾಟ-ಭೀವಶಿ, ಮಲ್ಲಿಕವಾಡ-ದತ್ತವಾಡ, ಕಾರದಗಾ-ಭೋಜ, ಯಕ್ಸಂಬಾ-ದತ್ತವಾಡ, ಸೇರಿದಂತೆ 8 ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

ಇಂದು ಮತ್ತೆ 5 ಸೇತುವೆ

ನಿನ್ನೆ ಸಂಜೆವರೆಗೆ 3 ಸೇತುವೆ ಮುಳುಗಡೆಗೊಂಡಿದ್ದವು. ನಿನ್ನೆ ರಾತ್ರಿ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮತ್ತೆ ಇಂದು 5 ಸೇತುವೆಗಳು ಸೇರಿದಂತೆ ಒಟ್ಟು 8 ಸೇತುವೆಗಳು ಜಲಾವೃತಗೊಂಡಿವೆ.

ಕೃಷ್ಣಾ, ವೇದಗಂಗಾ, ಧೂದಗಂಗಾ,ನದಿಗಳು ಅಪಾಯ ಮಟ್ಟ ತಲುಪಿರುವ ಹಿನ್ನೆಲೆ ನದಿತೀರದ ಈ ಗ್ರಾಮಗಳ ಹಳ್ಳಿಗರ ಪಾಡು ಅತಂತ್ರವಾಗಿದೆ.

ಸ್ಥಳಾಂತರಕ್ಕೆ ಎಚ್ಚರಿಕೆ

ಕಳೆದ 15 ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಅತಂತ್ರಗೊಂಡು ಶಾಲೆ, ಗಂಜಿ ಕೇಂದ್ರಗಳಲ್ಲಿ ವಾಸಿಸಿ ಮತ್ತೆ ಬಂದು ಹಳ್ಳಿ ಸೇರುವಷ್ಟರಲ್ಲಿ ವರುಣ ತನ್ನ ಆರ್ಭಟ ತೋರಿರುವ ಹಿನ್ನೆಲೆ ನದಿ ತೀರದ ನಿವಾಸಿಗಳಿಗೆ ಮತ್ತೆ ಎಚ್ಚರಿಕೆ ನೀಡಲಾಗಿದೆ.

ಈಗ ಮಕ್ಕಳು ಮರಿ ಜಾನುವಾರಗಳೊಂದಿಗೆ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕಾದ ಅನಿವಾರ್ಯತೆ ಬಂದೊದಗಿದೆ.

ಜಮಖಂಡಿಗೂ ಪ್ರವಾಹ ಭೀತಿ

ಮಹಾರಾಷ್ಟ್ರದ ರಾಧಾನಗರಿ, ರಾಜಪುರ ಜಲಾಶಯಗಳಿಂದ ಜಮಖಂಡಿ ತಾಲೂಕಿನ ಹಿಪ್ಪರಗಿ ಡ್ಯಾಂಗೆ 94,200 ಕ್ಯೂಸೆಕ್ಸ ನೀರು ಹರಿದು ಬರುತ್ತಿರುವುದರಿಂದ ಜಮಖಂಡಿ ತಾಲೂಕಿನ ಹಳ್ಳಿಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ಜಿಲ್ಲಾಡಳಿತ ಜನರ ಸ್ಥಳಾಂತರ, ಗಂಜಿಕೇಂದ್ರಗಳ ಸ್ಥಾಪನೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

Comments are closed.