ಬೆಂಗಳೂರು, ಆ. ೪- ವೈದ್ಯಕೀಯ ಕೋರ್ಸಿನ ಪ್ರವೇಶಾತಿಯ ನೀಟ್ ಪರೀಕ್ಷೆಯ ಫಲಿತಾಂಶದ ನಂತರ ಉಳಿಯುವ ವೈದ್ಯಕೀಯ ಸೀಟುಗಳಿಗೆ ಮತ್ತೊಂದು ಸುತ್ತಿನ ಸೀಟು ಆಯ್ಕೆ ಕೌನ್ಸಿಲಿಂಗ್ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಈ ವರ್ಷ ಸಿಇಟಿ ಮೂಲಕ 3 ಸಾವಿರ ವೈದ್ಯಕೀಯ ಸೀಟುಗಳ ಪ್ರವೇಶಾತಿಯನ್ನು ಪೂರ್ಣಗೊಳಿಸಲಾಗಿದೆ. ಆ. 24 ರಂದು ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲಿದ್ದು, ಫಲಿತಾಂಶದ ನಂತರ ಲಭ್ಯವಾಗುವ ಸೀಟುಗಳಿಗೆ ಮತ್ತೊಂದು ಸುತ್ತಿನ ಕೌನ್ಸಿಲಿಂಗ್ ನಡೆಸುವುದಾಗಿ ಅವರು ಹೇಳಿದರು.
ಸೀಟು ಲಭ್ಯತೆ ಹೆಚ್ಚಿದ್ದರೆ ಆನ್‌ಲೈನ್‌ನಲ್ಲೇ ಕೌನ್ಸಿಲಿಂಗ್ ನಡೆಯಲಿದ್ದು, ಸೀಟು ಸಂಖ್ಯೆ ಕಡಿಮೆ ಇದ್ದರೆ ಆಪ್‌ಲೈನ್ ಮೂಲಕ ಸೀಟು ಆಯ್ಕೆ ಮಾಡಿಕೊಳ್ಳಬಹುದು ಎಂದರು.
ಮುಂದಿನ ವರ್ಷ ಒಂದೇ ಪರೀಕ್ಷೆ
ಮುಂದಿನ ವರ್ಷ ವೈದ್ಯಕೀಯ ಪ್ರವೇಶಾತಿಗೆ ಅಖಿಲ ಭಾರತ ಮಟ್ಟದಲ್ಲಿ (ನೀಟ್) ಪರೀಕ್ಷೆ ನಡೆಯಲಿದ್ದು, ಈ ಱ್ಯಾಂಕಿಂಗ್ ಆಧಾರದ ಮೇಲೆಯೆ ಸೀಟುಗಳ ಹಂಚಿಕೆ ಆಗಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಈಗಾಗಲೇ 6 ಹೊಸ ವೈದ್ಯಕೀಯ ಕಾಲೇಜುಗಳು ಕಾರ್ಯಾರಂಭ ಮಾಡಿದ್ದು, 300 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಿದೆ ಎಂದರು,
ಬರುವ ವರ್ಷದಿಂದ ಇನ್ನೂ 6 ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಸ್ನಾತಕೋತ್ತರ ವೈದ್ಯ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಖಾಸಗಿಯವರು ಸ್ನಾತಕೋತ್ತರ ಕೋರ್ಸ್‌ಗಳನ್ನು ಹೊಸದಾಗಿ ಆರಂಭಿಸಲು ಮುಂದೆ ಬಂದರೆ ಅದಕ್ಕೆ ಒಪ್ಪಿಗೆ ನೀಡಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
Comments are closed.